ಚಂದ್ರವಳ್ಳಿ ನ್ಯೂಸ್, ಚನ್ನಗಿರಿ:
ಕಾರೊಂದು ನಿಯಂತ್ರಣ ತಪ್ಪಿ ಭದ್ರಾ ಕಾಲುವೆಗೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ, ನಾಲ್ವರು ಬದುಕುಳಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ (ಸೂಳೆಕೆರೆ) ಬಳಿಯ ಹೊಸೂರು ಕಾಲುವೆಯಲ್ಲಿ ಸಂಭವಿಸಿದೆ.
ದಾವಣಗೆರೆಯ ಮೂಲದ ಯುವಕರಾದ ಸಿದ್ದೇಶ್ (38) ಹಾಗೂ ಮಲ್ಲಿಕಾರ್ಜುನ್ (27) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಮಂಗಳೂರಿನ ಕೊರಗಜ್ಜನ ದೈವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ದಾವಣಗೆರೆಗೆ ಬರುವಾಗ ಈ ಅವಘಡ ಸಂಭವಿಸಿದೆ.
ಕಾರು ಚಾಲಕ ನಿದ್ದೆ ಮಂಪರಿನಲ್ಲಿದ್ದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾಲುವೆಗೆ ಬಿದ್ದಿದೆ. ಘಟನೆ ಬೆನ್ನಲ್ಲೇ, ಸ್ಥಳೀಯರು ಸಂತೇಬೆನ್ನೂರು ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಸಂತೇಬೆನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾಲುವೆಯಲ್ಲಿ ಬಿದ್ದಿದ್ದ ಕಾರು ಹಾಗೂ ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

