ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಕ್ಟೋಬರ್ 07ರ ಮುಂಜಾನೆ ಉತ್ತರ ಪ್ರದೇಶದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳ 19ದಿನಗಳ ನವಜಾತಾ ಶಿಶು ಉಸಿರಾಟ ಇಲ್ಲದೆ,ತನ್ನ ದೇಹದ ಸಂಪೂರ್ಣ ಸ್ವಾದಿನ ಕಳೆದುಕೊಂಡ ಸ್ಥಿತಿಯಲ್ಲಿದೆ ಎಂದ ಕೂಡಲೇ ತಡ ಮಾಡದೆ ತುರ್ತು ವಾಹನ ಚಾಲಕ ಮಧು ಸ್ಥಳಕ್ಕೆ ಧಾವಿಸಿ ಮಗುವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದ್ದರು.
ಪೋಷಕರೇ ನಮ್ಮ ಮಗು ನಮ್ಮ ಪಾಲಿಗಿಲ್ಲ ಎಂದು ಕೈಚಲ್ಲಿ ಕೂತಿದ್ದರು ಆದರೆ ಮಕ್ಕಳ ತಜ್ಞರಾದ ಡಾ. ಗಾಯತ್ರಿ. ಸಹ ವೈದ್ಯರಾದ ಲಲಿತಾ,ಶ್ರುಶುಷಕಾಧಿಕಾರಿಗಳಾದ ಶೋಭಾ, ಲಾವಣ್ಯ ರವರ ಸಹಕಾರದೊಂದಿಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ತಮ್ಮ ಸೇವಾ ನಿಷ್ಠೆ ಮರೆಯದೇ ಮಗುವನ್ನುಎನ್.ಬಿ.ಎಸ್.ಯು(NBSU) ತುರ್ತು ಘಟಕಕ್ಕೆ ರವಾನಿಸಿ ಅವಶ್ಯಕ ತುರ್ತು ಚಿಕಿತ್ಸೆ ನೀಡಿ ಮಗು ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.
ಮಗುವಿನ ಉಸಿರಾಟದ ಸ್ಥಿತಿ ಹತೋಟಿಗೆ ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ರವಾನಿಸಿದ್ದು ಇಂದು ಮಗು ಸಂಪೂರ್ಣ ಚೇತರಿಕೆ ಕಂಡು ತನ್ನ ಮನೆಗೆ ಹಿಂದಿರುಗಿದೆ. ಜೀವ ಉಳಿಸಿದ ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಸಾಮಾಜಿಕ ವಲಯದಲ್ಲಿ ವೈದ್ಯರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯ ಪದಾಧಿಕಾರಿಗಳ ಜೊತೆ
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಿ ಶಿವಶಂಕರ್ ಮತ್ತು ತಂಡ ತೆರಳಿ ಸಮಯಪ್ರಜ್ಞೆ ಮೆರೆದು ಮಗುವಿನ ಜೀವ ಉಳಿಸಿದ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ವೈದ್ಯರು ನಂಬಿಕೆ ಹಾಗೂ ವಿಶ್ವಾಸದಿಂದ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ.
ವೈದ್ಯರು ತಪ್ಪು ಮಾಡಿದಾಗ ಅವರ ವಿರುದ್ಧ ಮಾತನಾಡುವ ನಾವು ಅವರು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಅಭಿನಂದಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಇಂದು ಪುಟ್ಟ ಮಗುವಿನ ಜೀವ ಉಳಿಸಿರುವ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ನಮ್ಮ ತಂಡದಿಂದ ಪೋಷಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದೇವೆ. ಪೋಷಕರೇ ಮಗು ಉಳಿಯುವುದಿಲ್ಲ ಎಂದುಕೊಂಡಿದ್ದರು ಆದರೆ ವೈದ್ಯರು ಕೈಕಟ್ಟಿಕೂರಲಿಲ್ಲ ಅವರ ನಿರ್ಧಾರ ಹಾಗೂ ನೀಡಿದ ಚಿಕಿತ್ಸೆಯಿಂದಾಗಿ ಇಂದು ಮಗು ಜೀವಂತವಾಗಿದೆ ಎಂದರು.
ಮಗುವಿನ ಜೀವ ಉಳಿಸಿದ ಆಸ್ಪತ್ರೆ ಸಿಬ್ಬಂದಿಗೆ ಕೆ ಆರ್ ಎಸ್ ಸಮಿತಿ ಪದಾಧಿಕಾರಿಗಳು ಹಾಗೂ ಮಗುವಿನ ಪೋಷಕರು ಸಿಹಿ ನೀಡಿ ಅಭಿನಂದನೆ ಸಲ್ಲಿಸಿದರು.ಈ ವೇಳೆ ಉತ್ತರ ಪ್ರದೇಶದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳು ಮತ್ತು ಕೆ ಆರ್ ಎಸ್ ಸಮಿತಿ ಮುಖಂಡರಾದ ಹೆಚ್ ಎನ್ ವೇಣು,ಮಾರುತಿ,ಜಿ ಕೆ ವೆಂಕಟೇಶ್, ಸಿ. ರಂಜಿತಾ, ಆರ್ ರಾಜೇಶ್, ಟಿ ಎಂ ಶ್ರೀನಿವಾಸ್, ಸರಸ್ವತಿ, ಪದ್ಮಾವತಿ ಸೇರಿದಂತೆ ಹಲವರು ಹಾಜರಿದ್ದರು.

