ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಬ್ಬು ಬೆಳೆಗಾರರು ಕಳೆದ ಒಂದು ತಿಂಗಳಿನಿಂದಲೂ ತಮ್ಮ ಸಂಕಷ್ಟ ಪರಿಹರಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ನಾವೂ ಸಹ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿಯ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೆವು. ಹೋರಾಟಕ್ಕೆ ಮಣಿದು ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರು ಹಾಗೂ
ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆದು ಸಭೆ ನಡೆಸಿದ್ದರೂ ಇನ್ನೂ ಸಹ ವಾತಾವರಣ ತಿಳಿಯಾಗುತ್ತಿಲ್ಲ. ಬೀದರ್, ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ದಿನೇ ದಿನೇ ಕಾವೇರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆತಂಕ ವ್ಯಕ್ತ ಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಒಳ ಜಗಳಗಳನ್ನು ಬದಿಗಿಟ್ಟು ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಂಡು, ಕನಿಷ್ಠ ಪಕ್ಷ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳನ್ನಾದರೂ ಅಲ್ಲಿಗೆ ಕಳಿಸಿಕೊಡಬೇಕಿತ್ತು.
ಸರ್ಕಾರ ಈ ಕೂಡಲೇ ಗಂಭೀರವಾಗಿ ಪರಿಗಣಿಸಿ ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

