ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳಾದ ಪಿಯುಶ್ ಗೊಯಲ್ ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP) ಅನುಷ್ಠಾನ ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿರವರು.
ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆಯ ಚೌಕಟ್ಟಿನ ಅಡಿಯಲ್ಲಿ ಕೈಗಾರಿಕಾ ಪಾರ್ಕ್‘ಗಳನ್ನು ಸ್ಥಾಪಿಸುವ ಕುರಿತು ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಸಮಾಲೋಚಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆಯೇ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯವನ್ನು ಅಧಿಕವಾಗಿ ಅಭಿವೃದ್ಧಿಪಡಿಸಲು ಹಾಗೂ

ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಗೋಯಲ್ ಅವರಿಗೆ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು.
ಸಂತೋಷದ ಸಂಗತಿ ಎಂದರೆ ಗೋಯಲ್ ಅವರು ಕುಮಾರಸ್ವಾಮಿ ಅವರು ಸಲ್ಲಿಸಿದ ಪ್ರಸ್ತಾವನೆಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

