ಮಧುಮೇಹ ಅಲಸ್ಯಬೇಡ ಮುತುವರ್ಜಿ ಮುಖ್ಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಮಧುಮೇಹ ಅಲಸ್ಯಬೇಡ ಮುತುವರ್ಜಿ ಮುಖ್ಯ. ನವೆಂಬರ್ 14 ವಿಶ್ವ ಮಧುಮೇಹ ದಿನದ ಪ್ರಯುಕ್ತ ಮಧುಮೇಹ ಕುರಿತು ಮಾಹಿತಿ
ಜನರ ಆರೋಗ್ಯ ಶಿಕ್ಷಣ ಕ್ರಾಂತಿ ಸಕ್ಕರೆ ಖಾಯಿಲೆ ತಡೆಯಲು ಬಹುಮುಖ್ಯ ಪಾತ್ರ ವಹಿಸುತ್ತದೆ ಇದು ನನ್ನ ಅನುಭವ ಕೂಡ.

ಜನರಿಗೆ ಆರೋಗ್ಯದ ಬಗ್ಗೆ ಉಡಾಫೆ ಮನೋಭಾವ ಇನ್ನೂ ಇದೆ “ಇರೊದ್ ಒಂದು ದಿನ ಸಾಯೋದು ಒಂದು ದಿನ, ಇದ್ದಷ್ಟು ದಿನ ಆರಾಮ್ ತಿಂದ್ಕೊಂಡ್ ಉಂಡ್ಕೊಂಡ್ ಇರೋಣ ಅಂತ” “ಈ ಖಾಯಿಲೆ ಪಾಯಿಲೆ ಅಂತಾ ತಲೆಗೆ ಚಿಂತೆ ಹಚ್ಚ ಬೇಡಿ ” ಅನ್ನೊರೆ ಹೆಚ್ಚು!.. ಹಿಗೆನ್ನುವವರ ಅಂಡಿಗೆ ಬಾಸುಂಡೆಯನ್ನ ಅವರಿಗೆ ಅರಿವಿಲ್ಲದೆ ಕೊಟ್ಟು ಆರೋಗ್ಯ ಶಿಕ್ಷಣ ನೀಡುವುದು ಎಲ್ಲರ ಕರ್ತವ್ಯ.

- Advertisement - 

ಡಯಾಬಿಟಿಸ್ ಬಗ್ಗೆ ಭಯದ ಅಗತ್ಯ ಇಲ್ಲ, ಅರಿವು ಮುಖ್ಯ, ಅರಿವೇ ಗುರು, ಅರಿವಿದ್ದರೆ ಇಂತಹ ಖಾಯಿಲೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಬಂದರೆ ಆಗು ಹೋಗುಗಳ ಬಗ್ಗೆ ಅರಿವು ಇಟ್ಟುಕೊಳ್ಳುವ ಮೂಲಕ ಇತರ ಸಮಸ್ಯೆಗಳು ಸಕ್ಕರೆ ಖಾಯಿಲೆಯಿಂದ ಸೃಷ್ಟಿಯಾಗದೆ ನೋಡಿಕೊಳ್ಳುವುದು ಉತ್ತಮ.

ಡಯಾಬೆಟಿಕ್_ಕ್ಯಾಪಿಟಲ್ ಭಾರತ !
ಹೌದು ಭಾರತದಲ್ಲೇ ಹೆಚ್ಚು ,ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ಸಮಸ್ಯೆ ಯಿಂದ ಉಂಟಾಗುವ ಒಂದು ಖಾಯಿಲೆ. ಪ್ರಪಂಚದಲ್ಲಿ ಬೇರೆ ರಾಷ್ಟ್ರಗಳಿಗಿಂತ ಭಾರತ ದೇಶದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜನರಿಗೆ ಜೊತೆಗೆ  ಶಾಲಾ ಮಕ್ಕಳಿಗೆ ಉತ್ತಮ ಜೀವನಶೈಲಿಯನ್ನು ಹೇಳಿಕೊಡುವ ಮೂಲಕ ಸರ್ಕಾರ ಸಂಘಗಳು, ಶಿಕ್ಷಣ ಸಂಸ್ಥೆ ಹಾಗೂ ಪೋಷಕರು ಮುಂದಾಗಬೇಕು. ಇದರಿಂದ ಸಮಾಜದ ಬದಲಾವಣೆ ಖಂಡಿತ ಸಾಧ್ಯ.

- Advertisement - 

ಸಕ್ಕರೆ_ಖಾಯಿಲೆ ಎಂದರೇನು?
 ದೇಹದ ರಕ್ತದಲ್ಲಿ ಗ್ಲೂಕೋಸ್/ಸಕ್ಕರೆ ಮಟ್ಟ ತುಂಬಾ ಜಾಸ್ತಿಯಾಗುವ ಒಂದು ಕಾಯಿಲೆ. ವ್ಯಕ್ತಿಯ ದೇಹ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ  ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡದಿದ್ದಲ್ಲಿ ಸಕ್ಕರೆ ಖಾಯಿಲೆ (ಮಧುಮೇಹ) ಉಂಟಾಗುತ್ತದೆ. ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಮಧುಮೇಹ 1ನೆಯ ವಿಧದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಮಧುಮೇಹ 2ನೆಯ ವಿಧದಲ್ಲಿ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡುವುದಿಲ್ಲ, ತದನಂತರ  ಮೇದೋಜೀರಕ ಗ್ರಂಥಿಗೆ (Pancreas)ದೇಹಕ್ಕೆ ಅವಶ್ಯವಾದ ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯು ಅಧಿಕವಾಗುತ್ತದೆ. ಮಧುಮೆಹಿಗಳ ಪೈಕಿ ಹೆಚ್ಚಿನವರಿಗೆ 2ನೆಯ ವಿಧದ ಮಧುಮೇಹವಿರುತ್ತದೆ.

1ನೆಯ ವಿಧದ ಮಧುಮೇಹ ಎಂದರೇನು? (TYPE 1 DM/ Insulin Dependent Diabetes Mellitus)

1ನೆಯ ವಿಧದ ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕೂಡ ಕರೆಯುತ್ತಾರೆ. ಮಧುಮೇಹ ಬಾಧಿತ ಜನರ ಪೈಕಿ ಸುಮಾರು 10% ಈ ಪ್ರಕಾರವನ್ನು ಹೊಂದಿರುತ್ತಾರೆ. ಇದನ್ನು ಸಾಮಾನ್ಯವಾಗಿ ಜ್ಯುವೆನಿಲ್ ಮಧುಮೇಹ ಕರೆಯುತ್ತಾರೆ ಏಕೆಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ, 40 ವರ್ಷಗಳ ವರೆಗಿನ ವಯೋಮಾನದ ಕೆಲವು ವಯಸ್ಕರಲ್ಲಿ ಸಹ ಇದು ಕಾಣಿಸಿಕೊಳ್ಳಬಹುದು.

2ನೆಯ ವಿಧದ ಮಧುಮೇಹ ಎಂದರೇನು?(TYPE 2/ Non Insulin Dependent DM)
ಮಧುಮೇಹ 2 ನೆಯ ವಿಧ ಸಾಮಾನ್ಯವಾಗಿ ವಯಸ್ಕರಲ್ಲಿ  ಮತ್ತು ಮುಖ್ಯವಾಗಿ ಅಧಿಕತೂಕದ ವ್ಯಕ್ತಿಗಳಲ್ಲಿ ಉಂಟಾಗುತ್ತದೆ. ಶರೀರದ ಜೀವಕೋಶಗಳು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯಿಸದಂತಹ ಸ್ಥಿತಿಯಲ್ಲಿ ಹೆಚ್ಚಿದ ಇನ್ಸುಲಿನ್ ಅವಶ್ಯಕತೆ ನಿಭಾಯಿಸಲು ಮೇದೋಜೀರಕ ಗ್ರಂಥಿ ವಿಫಲವಾದರೆ ಇದು ಉಂಟಾಗುತ್ತದೆ. ಅದ್ಯಾಗೂ ನಿಯಂತ್ರಣ ತಪ್ಪಿದರೆ ಇನ್ಸುಲಿನ್ ಮೊರೆ ಅನಿವಾರ್ಯ.

ಮಕ್ಕಳಲ್ಲಿ ಮಧುಮೇಹ 2ನೆಯ ವಿಧ ಕಂದುಬರಬಹುದೇ?
ಹೌದು. ಹಿಂದೆ, ವೈದ್ಯರು ಕೇವಲ ವಯಸ್ಕರಿಗೆ ಮಾತ್ರ 2ನೆಯ ವಿಧದ ಮಧುಮೇಹದ ಅಪಾಯವಿದೆ ಎಂದು ಭಾವಿಸಿದ್ದರು. ಆದರೆ, ಪ್ರಪಂಚದಾದ್ಯಂತ ಮಕ್ಕಳಲ್ಲಿ ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಈಗ ಮಧುಮೇಹ 2ನೆಯ ವಿಧದ ರೋಗನಿರ್ಣಯ ಮಾಡಲಾಗುತ್ತದೆ. ಈ ಹೆಚ್ಚಳವು ಬಹುಶಃ  ಮಕ್ಕಳಲ್ಲಿ  ಆಧುನಿಕ ಜೀವನಶೈಲಿಯ ಭಾಗವಾದ ಹೆಚ್ಚು-ತೂಕ ಅಥವಾ ಸ್ಥೂಲಕಾಯ ಮತ್ತು ಕಡಿಮೆ ದೈಹಿಕ ಸಕ್ರಿಯತೆ ಇವುಗಳು ಹೆಚ್ಚಾಗಿರುವುದರಿಂದ ಉಂಟಾಗುತ್ತಿರಬಹುದು.

ಪ್ರಿ_ಡಯಾಬಿಟಿಸ್ ಎಂದರೇನು?
 ರಕ್ತದಲ್ಲಿ ಸಕ್ಕರೆಯ ಮಟ್ಟವು  ಸಾಮಾನ್ಯಕ್ಕಿಂತ ಹೆಚ್ಚು ಆದರೆ ಮಧುಮೇಹ ಎಂದು ನಿರ್ಣಯಿಸುವ ಮಟ್ಟಕಿಂತ ಕಡಿಮೆ ಇದ್ದಾಗ ನಿಮಗೆ ಪ್ರಿ-ಡಯಾಬಿಟಿಸ್ ಇದೆ ಎಂದು ಹೇಳಬಹುದು. ಪ್ರಿ-ಡಯಾಬಿಟಿಸ್ ಉಳ್ಳವರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಲಿದೆ. ಇದು 2ನೆಯ ವಿಧದ ಮಧುಮೇಹ ಉಂಟಾಗುವ ಸಾಧ್ಯತೆಯನ್ನು ಮಹತ್ತರವಾಗಿ ಹೆಚ್ಚಿಸುತ್ತದೆ.

ಒಳ್ಳೆಯ ಸುದ್ದಿಯೇನೆಂದರೆ ನೀವು ಪ್ರಿ-ಡಯಾಬಿಟಿಸ್ ಮಧುಮೇಹವಾಗಿ ಪರಿವರ್ತನೆಗೊಳ್ಳುವುದನ್ನು ತಡೆಯಬಹುದು ಇಲ್ಲವೇ ನಿಧಾನಗೊಳಿಸಬಹುದು. ಆರೋಗ್ಯಕಾರ ಆಹಾರ ಪದ್ಧತಿ, ತೂಕವನ್ನು ಸರಿಯಾದ ಮಟ್ಟದಲ್ಲಿರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಂತಾದ ಜೀವನ ಶೈಲಿ ಬದಲಾವಣೆಯಿಂದ ಇದು ಸಾಧ್ಯ.

ಜೀವನ_ಶೈಲಿಯಿಂದ ಸಕ್ಕರೆ ಖಾಯಿಲೆ ತಡೆಯಲು ಬಹಳ ಸುಲಭ!..
ಸಿರಿಧಾನ್ಯ ಸೊಪ್ಪು ಬಳಕೆಯಿಂದ ಲಾಭ

ರಾಗಿ, ನವಣೆ, ಬರಗು, ಊದಲು ಮತ್ತಿತರೆ ಸಿರಿ ಧಾನ್ಯ ಸೊಪ್ಪುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆಯಿಂದ  ಮಧುಮೇಹದಿಂದ ದೂರ ಇರಬಹುದು ಮತ್ತು ಹತೋಟಿಗೆ ತರಬಹುದು. ನಿತ್ಯದ ಜೀವನದಲ್ಲಿ ವೈದ್ಯರು/ನರ್ಸಿಂಗ್ ಆಫಿಸರ್ಸ್/ಡಯಟಿಷನ್ಸ್  ಸಲಹೆ ಪಡೆದು ಮಧುಮೇಹ ತಡೆಗಟ್ಟಲು ಸಲಹೆ ಪಡೆದುಕೊಳ್ಳಬೇಕು.  ಸಮುದಾಯ_ಆರೋಗ್ಯ_ಅಧಿಕಾರಿಗಳು ಪ್ರತಿ ಹೋಬಳಿ  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯರಿದ್ದು ಅವರ ಜೋತೆ ಆಪ್ತ ಸಮಾಲೋಚನೆ ನಡೆಸಿ ಯಾವುದೇ ಖಾಯಿಲೆ ಗಳ ಮಾಹಿತಿ ಪಡೆಯಬಹುದಾಗಿದೆ.

 ನಿಯಮಿತವಾಗಿ ವ್ಯಾಯಾಮ ಯೋಗ ಕೂಡ ಬಹಳಷ್ಟು ಖಾಯಿಲೆ ತಡೆಯಲು ಸಹಕಾರಿಯಾಗುತ್ತವೆ . ಒತ್ತಡದ ಜೀವನ ಮಧ್ಯೆ ಸಾಕಷ್ಟು ವಿಷಯಗಳನ್ನು ಜನರು ಮರೆತಿದ್ದಾರೆ.

ಮಧುಮೇಹ ಬಂದ ನಂತರ  ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ  ನಡಿಗೆ ವಿಧಾನಗಳಿಂದ ಕಾಯಿಲೆಯನ್ನು ದೂರವಿಡಬಹುದು. ದಿನನಿತ್ಯ ಉತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದಲೂ ಮಧುಮೇಹ ಕಡಿಮೆ ಮಾಡಬಹುದು.

ತಪಾಸಣಾ ಶಿಬಿರ, ಜಾಥಾ ಆರೋಗ್ಯ ಶಿಕ್ಷಣ: ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರ, ಕಾಯಿಲೆಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ, ಬೀದಿ ನಾಟಕಗಳ ಮೂಲಕ ಸರ್ಕಾರ ಸಂಘ ಶಿಕ್ಷಣ ಸಂಸ್ಥೆಗಳು ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು

ರೋಗಲಕ್ಷಣಗಳೇನು?
ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತಗಳಲ್ಲಿ, ಯಾವುದೇ ರೋಗಲಕ್ಷಣಗಳು ಇರದಿರಬಹುದು, ಆದ್ದರಿಂದ ನಿಮಗೆ ಮಧುಮೇಹ ಇದೆ ಎಂದು ತಿಳಿಯದೇ ಇರಬಹುದು.  ನಿಮಗರಿವಿಲ್ಲದೇ ಯಾವುದೇ ರೋಗಲಕ್ಷಣವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು. 

ಅತಿಯಾದ ಹಸಿವು,ಅತಿ ಬಾಯಾರಿಕೆ,ಪದೇ ಪದೇ ಮೂತ್ರ ವಿಸರ್ಜನೆ,ವಿವರಿಸಲಾಗದ ತೂಕ ನಷ್ಟ,ದೃಷ್ಟಿ ಮಸುಕಾಗುವಿಕೆ,ಯಾವಗಲೂ ಸುಸ್ತಾಗಿರುವ ಅನುಭವ,

ಗಾಯಗಳು ಗುಣವಾಗದಿರುವುದು,ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ,ಕೈ ಅಥವಾ ಕಾಲುಗಳ ಅಡಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ,ಪುನರಾವರ್ತಿಸುವ ಸೋಂಕುಗಳು (ಚರ್ಮ, ಹಲ್ಲುಗಳ ವಸಡು, ಮೂತ್ರಕೋಶ), ಯೋನಿಯ ಈಸ್ಟ್ ಸೋಂಕು ಇತರೆ.

ಮಧುಮೇಹ 2ನೆಯ ವಿಧ  ಇರುವವರಲ್ಲಿ ಇನ್ಸುಲಿನ್ ಪ್ರತಿರೋಧ ಲಕ್ಷಣಗಳನ್ನು ನೋಡಬಹುದು: ಕುತ್ತಿಗೆಯ ಸುತ್ತ ಅಥವಾ ಚರ್ಮದ ವರ್ಣ ದಟ್ಟವಾಗುವುದು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಹದಿಹರೆಯದ ಹುಡುಗಿಯರಲ್ಲಿ ಹಾಗೂ ಮಹಿಳೆಯರಲ್ಲಿ ಋತುಚಕ್ರದ ಏರುಪೇರು  ಇತ್ಯಾದಿ.

ಚಿಕಿತ್ಸೆ ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ನಿಮ್ಮ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ತೀರಾ ಅಧಿಕವಾದರೆ, ಕೀಟೋಅಸಿಡೋಸಿಸ್ ಎಂಬ ತೊಂದರೆಯು ಉಂಟಾಗಬಹುದು. ಹೀಗೆ ಆದಲ್ಲಿ ನಿಮಗೆ ಉಸಿರಾಟದ ತೊಂದರೆ, ಹೊಟ್ಟೆಯಲ್ಲಿ  ನೋವು, ವಾಂತಿ, ಬಾಯಿ ಒಣಗುವುದು, ಶರೀರದಲ್ಲಿ ನೀರಿನ ಕೊರತೆ ಮತ್ತು ಕೋಮಾ ಹಾಗೂ ಚಿಕಿತ್ಸೆ ನೀಡದಿದ್ದರೆ ಸಾವೂ ಸಂಭವಿಸಬಹುದು. ಡಯಾಬಿಟಿಸ್ ಕೂಡ ಇತರ ಖಾಯಿಲೆ ತರುವ ಸಾಧ್ಯತೆ ಹೆಚ್ಚು  ಬಿಪಿ , ಹೃದಯ ಸಂಬಂಧಿ ಖಾಯಿಲೆ ತರುವಲ್ಲಿ ಮಧುಮೇಹ ಪ್ರಮುಖ ಪಾತ್ರವಹಿಸುತ್ತದೆ.

ರೋಗ ನಿರ್ಣಯ-
ಮಧುಮೇಹವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು
, ಚಿಕಿತ್ಸೆ ಪಡೆಯುವುದು ಹಾಗೂ ತಡೆಗಟ್ಟುವುದು ಮುಖ್ಯ,ಯಾಕೆಂದರೆ ಚಿಕಿತ್ಸೆ ಇಲ್ಲದೇ ಮಧುಮೇಹವು ಇನ್ನೂ ಉಲ್ಬಣಗೊಳ್ಳುವುದು. ಇದು ಅನೇಕ ಆರೋಗ್ಯ ಸಂಭಂದಿತ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು:

ಕಣ್ಣಿನ ಹಾನಿಯು ಕುರುಡುತನಕ್ಕೆ ಕಾರಣವಾಗಬಹುದು ಮೂತ್ರಪಿಂಡಗಳ ವೈಫಲ್ಯ, ನರಗಳ ಮತ್ತು ರಕ್ತನಾಳಗಳ ಹಾನಿಯು ಕಾಲ್ಬೆರಳುಗಳನ್ನು ಅಥವಾ ಕಾಲಿನ ನಷ್ಟಕ್ಕೆ ಕಾರಣವಾಗಬಹುದು. ಹೃದಯಾಘಾತ, ಸ್ಟ್ರೋಕ್ ಮತ್ತು ಪಾರ್ಶ್ವವಾಯು, ಪುರುಷರಲ್ಲಿ ಲೈಂಗಿಕ ಶಕ್ತಿಹೀನತೆ.

ಒಸಡುಗಳ ತೊಂದರೆಗಳು ಹಲ್ಲಿನ ನಷ್ಟಕ್ಕೂ ಕಾರಣವಾಗಬಹುದು-
 ಶರೀರವನ್ನು ಅಧಿಕ ಸಕ್ಕರೆಗೆ ಎಸ್ಟು ಹೆಚ್ಚು ಸಮಯ ಒಡ್ಡಿಕೊಳ್ಳುತ್ತೀರೋ ಅಷ್ಟು ಹೆಚ್ಚು ತೊಂದರೆಗಳು ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಶಿಫಾರಸು ಮಾಡಿದ ಮೌಲ್ಯಕ್ಕೆ ಅತಿ ಹತ್ತಿರದಲ್ಲಿ ಕಾಯ್ದುಕೊಳ್ಳುವುದರಿಂದ ನೀವು ಮಧುಮೇಹದಿಂದಾಗುವ ತೊಂದರೆಗಳನ್ನು ಕಡಿಮೆಗೊಳಿಸಬಹುದು, ವಿಳಂಬಿಸಬಹುದು, ಅಥವಾ ಕೆಲ ಸಂಧಾರ್ಭದಲ್ಲಿ ಸಂಪೂರ್ಣವಾಗಿ ತಡೆಗಟ್ಟಬಹುದು. ಪ್ರಸಿದ್ಧ ಅಧ್ಯಯನಗಳು ಮಧುಮೇಹದ ಮೊದಲಿನ ದಿನಗಳಲ್ಲಿ ಉತ್ತಮ ನಿಯಂತ್ರಣ ಭವಿಷ್ಯದ ತೊಂದರೆಗಳನ್ನು ತಡೆಗಟ್ಟುವಲ್ಲಿ ಗುರುತರ ಪಾತ್ರವಹಿಸಬಹುದು ಎಂದು ತೋರಿಸಿವೆ.

ಮಧುಮೇಹವಿದೆಯೇ ಎಂದು ಹೇಗೆ ತಿಳಿದುಕೊಳ್ಳಬಹುದು?
ಮಧುಮೇಹ ತಪಾಸಿಸಲು, ನಿಮ್ಮ ವೈದ್ಯರು ಕೆಳಗಿನ ಪರೀಕ್ಷೆಗಳಲ್ಲಿ ಯಾವುದನ್ನಾದರೂ ಮಾಡಿಸಬಹುದು: FBS ,PPBS , ನಿರಾಹಾರವಿದ್ದಾಗ ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ: ಇದು 8 ಗಂಟೆಗಳ ಒಂದು ರಾತ್ರಿಯ ಉಪವಾಸದ ನಂತರ ಸಾಮಾನ್ಯವಾಗಿ ಮಾಡಲಾಗುತ್ತದೆ. ನಿಮ್ಮ ರಕ್ತದ ಸಕ್ಕರೆ ಒಂದು ವೇಳೆ 130 mg / dL ಇದ್ದಲ್ಲಿ, ಪರೀಕ್ಷೆಯನ್ನು ಖಚಿತಪಡಿಸಲು ಪುನರಾವರ್ತನೆ ಮಾಡಬಹುದು. ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು 130 deciliter (mg / dL) ಗಿಂತ ಹೆಚ್ಚಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದು ತಿಳಿಯತಕ್ಕದ್ದು.

ರಕ್ತದಲ್ಲಿ ಸಕ್ಕರೆ ಮಟ್ಟವು 100 mg/dL ನಿಂದ  130 mg/dL ಮಧ್ಯೆ ಇದ್ದಲ್ಲಿ ಪ್ರಿ-ಡಯಾಬೇಟಿಸ್ ಎಂದು ಕರಯುವರು

ಓರಲ್ ಗ್ಲೂಕೋಸ್ ಟಾಲೆರೆನ್ಸ್ ಟೆಸ್ಟ್:  ಈ ಪರೀಕ್ಷೆಯಲ್ಲಿ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿಮಗೆ 75 ಗ್ರಾಂ ಗ್ಲುಕೋಸ್  ಕರಗಿರುವ ನೀರನ್ನು ಕುಡಿಯಲು ಕೊಡಲಾಗುತ್ತದೆ.  ನಂತರ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಮಿತ ಅಂತರಗಳಲ್ಲಿ ಅಳೆಯಲಾಗುತ್ತದೆ. ರಕ್ತದಲ್ಲಿ ಸಕ್ಕರೆ 200 mg / dL ಅಥವಾ ಅದಕ್ಕೂ ಹೆಚ್ಚು ಮಟ್ಟಕ್ಕೇರಿದರೆ  ನೀವು ಮಧುಮೇಹದ ಹೊಂದಿದ್ದೀರಿ ಎಂದು ತಿಳಿಯಬಹುದು.

HbA1C ಪರೀಕ್ಷೆ:  ಈ ಪರೀಕ್ಷೆಯನ್ನು ದಿನದ ಯಾವುದೇ ಸಮಯದಲ್ಲಿ ಪಡೆದ ರಕ್ತದ ಮಾದರಿಯಿಂದ ಮಾಡಬಹುದು.  ಖಾಲಿ ಹೊಟ್ಟೆಯಲ್ಲಿರುವ ಅವಶ್ಯಕತೆ ಇರುವುದಿಲ್ಲ.  HbA1ಮೌಲ್ಯ > 6.5% ಇದ್ದ ವೇಳೆ ನೀವು ಮೇಲೆ ತಿಳಿಸಲಾದ ಯಾವುದಾದರೂ ರೋಗಲಕ್ಷಣಗಳನ್ನು ಹೊಂದಿದ್ದರೆ ಇದು ಮಧುಮೇಹವನ್ನು ಸೂಚಿಸುತ್ತದೆ. ಇಲ್ಲದಿದ್ದರೆ ನಿಮ್ಮ ವೈದ್ಯರು ಮಧುಮೇಹವನ್ನು ಖಚಿತಪಡಿಸಲು ಮತ್ತೆ ಪರೀಕ್ಷಿಸಲು ಹೇಳಬಹುದು.

ರಾಂಡಮ್ ರಕ್ತ(RBS) ಸಕ್ಕರೆಯ ಪರೀಕ್ಷೆ: ಇದನ್ನು ಸಾಮಾನ್ಯವಾಗಿ ಮಾಡಲಾಗುವುದಿಲ್ಲ. ಆದರೂ ಇದು ಒಂದು ವೇಳೆ >200mg/dL ಅಧಿಕ ಇದ್ದು ಜೊತೆಯಲ್ಲಿ ಮಧುಮೇಹದ ಯಾವುದೇ ರೋಗಲಕ್ಷಣಗಳಿದ್ದರೆ (ವಿಪರೀತ ಬಾಯಾರಿಕೆ, ಮೂತ್ರ ವಿಸರ್ಜನೆ, ವಿವರಿಸಲಾಗದ ತೂಕದ ನಷ್ಟ ಇತ್ಯಾದಿ) ಮಧುಮೇಹ ಇದೆಯಂದು ತಿಳಿಯಬೇಕು. ಈ ತರಹದ ಯಾವುದೇ ರೋಗಲಕ್ಷಣಗಳು ಇಲ್ಲದ ವೇಳೆ ನಿಮ್ಮ ವೈದ್ಯರು ಇತರೆ ಪ್ರಮಾಣಿತ ಪರೀಕ್ಷೆಗಳಲ್ಲಿ ಒಂದನ್ನು ಮಾಡಿಸಲು ಸೂಚಿಸಬಹುದು.

(ಈ ಮೇಲಿನ  ಮಾಹಿತಿಯನ್ನು ನುರಿತ ಅನುಭವಿ ಮಧುಮೇಹ ಪರಿಣಿತ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಂದ ಸಂಕ್ಷಿಪ್ತವಾಗಿ ಸಂಗ್ರಹಿಸಿ ಬರೆಯಲಾಗಿರುತ್ತದೆ)
ಲೇಖನ-ಚಮನ್ ಷರೀಫ್.ಆದಿವಾಲ, ಸಾಮಾಜಿಕ ಕಾರ್ಯಕರ್ತರು, ಹಿರಿಯೂರು.

 

 

 

Share This Article
error: Content is protected !!
";