ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ ಅಂಗವಾಗಿ ‘ಜನನಿ’ ಜನಜಾಗೃತಿ, ಆರೋಗ್ಯ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶನದಡಿ ಈ ಬಾರಿಯ ಪ್ರಕೃತಿ ಚಿಕಿತ್ಸಾ ದಿನವನ್ನು ಲೂಸಿಂಗ್ ವೈಟ್ ನ್ಯಾಚುರಲಿ ಥ್ರೂ ನ್ಯಾಚುರೋಪತಿಧ್ಯೇಯವಾಕ್ಯದಡಿ, ಅಧಿಕ ದೇಹತೂಕ ಮತ್ತು ಬೊಜ್ಜು ಸಮಸ್ಯೆಗ ನೈಸರ್ಗಿಕ ಪರಿಹಾರಗಳ ಬಗ್ಗೆ ಅರಿವು ಮೂಡಿಸಲು ಆದ್ಯತೆ ನೀಡಲಾಗುವುದು ಎಂದು ಜಯ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಎಸ್.ಎನ್.ಮಹೇಶ್ ಮತ್ತು ಮುಖ್ಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

- Advertisement - 

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪ್ರಯೋಜನಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಡೀ ಮಧ್ಯ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಉಚಿತ ಆರೋಗ್ಯ ಶಿಬಿರ, ಜಾಗೃತಿ ಜಾಥಾ, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಮಧ್ಯ ಕರ್ನಾಟಕದಲ್ಲೇ ಪ್ರಥಮ ಎನಿಸಿದ ಅತ್ಯಾಧುನಿಕ ಹಆಗೂ 100 ಹಾಸಿಗೆ ಸೌಲಭ್ಯವಿರುವ ಜನನಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಚ್ಚ ಹಸಿರಿನ ಪ್ರಶಾಂತ ಪರಿಸರದಲ್ಲಿ ಹರಪನಹಳ್ಳಿಯಿಂದ ಕೇವಲ ಒಂಬತ್ತು ಕಿಲೋಮೀಟರ್ ದೂರದ, ಆರೂವರೆ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದ್ದು, ಕಲ್ಯಾಣ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಎನಿಸಲಿದೆ ಎಂದು ಹೇಳಿದರು.

- Advertisement - 

ಜೀವನಶೈಲಿ ರೋಗಗಳು ಇಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಮುನ್ನಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುವಜನತೆಯಿಂದ ಹಿಡಿದು ಶ್ರಮಶಕ್ತಿಯ ಕ್ಷಮತೆಯನ್ನೇ ಜೀವನಶೈಲಿ ರೋಗಗಳು ಕ್ಷಯಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆಧುನಿಕ ವೈದ್ಯವಿಜ್ಞಾನ ರೋಗಚಿಕಿತ್ಸೆಗಿಂತ ರೋಗಗಳು ಬಾಧಿಸದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಿದ್ದು, ಸಮಗ್ರ ಸುಕ್ಷೇಮಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವರದಾನವಾಗಿದ್ದು, ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಲಾಗುತ್ತಿದೆ. ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಮತ್ತು ಪ್ರಕೃತಿ ವಿಜ್ಞಾನ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಸಂಸ್ಥೆಯ ಉದ್ದೇಶ ಎಂದು ವಿವರಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರು, ದಕ್ಷಿಣ ಕನ್ನಡದ ಧರ್ಮಸ್ಥಳದಂಥ ದೂರದ ಊರುಗಳಿಗೆ ಹೋಗುವುದು ತಪ್ಪಿ ಈ ಭಾಗದ ಜನತೆಗೆ ಮನೆಬಾಗಿಲಲ್ಲೇ ಈ ಸೇವೆ ಲಭ್ಯವಾಗಲಿದೆ. ಪ್ರಕೃತಿ ಚಿಕಿತ್ಸಾ ದಿನದ ಅಂಗವಾಗಿ ಡಿಸೆಂಬರ್ 31ರವರೆಗೆ ಆಗಮಿಸುವ ಆರೋಗ್ಯ ಸಾಧಕರಿಗೆ ವಿಶೇಷ ರಿಯಾಯ್ತಿಯನ್ನೂ ನೀಡಲಾಗುವುದ ಎಂದು ಡಾ.ಪಾದೇಕಲ್ ವಿವರಿಸಿದರು.

ಹರಪನಹಳ್ಳಿಯ ಕೊಮಾರನಹಳ್ಳಿಯ ಸಮೀಪದ ಸುಂದರ ಪ್ರಕೃತಿಯ ಮಡಿಲಲ್ಲಿ ಅತ್ಯಾಧುನಿಕ ಸಔಲಭ್ಯಗಳೊಂದಿಗೆ ಗ್ರಾಮೀಣ ಪ್ರಶಾಂತ ಪರಿಸರದಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ, ಮೂರು ದಶಕಗಳ ಅನುಭವ ಹೊಂದಿರುವ ಮುಖ್ಯ ವೈದ್ಯಾಧಿಕಾರಿ ಮತ್ತು ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ನೇತೃತ್ವದ ನುರಿತ ವೈದ್ಯಕೀಯ ಸಿಬ್ಬಂದಿಯ ಸೇವೆ ದೊರಕಲಿದೆ.

ಪ್ರಕೃತಿಯ ಜ್ಞಾನ ಮತ್ತು ಆಧುನಿಕ ಆರೈಕೆಯ ಸಮನ್ವಯದೊಂದಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಅನುಭವಿಸಲು ಪೂರಕ ಪರಿಸರವನ್ನು ಅಭಿವೃದ್ಧಿಪಡಿಸಲಾಗಿದ್ದು, ಹಿಪ್ ಬಾತ್, ಸ್ಪೈನಲ್ ಬಾತ್, ಎನಿಮಾ, ಕೊಲೊನ್ ಹೈಡ್ರೊಥೆರಪಿ, ಅಂಡರ್‍ವಾಟರ್ ಮಸಾಜ್, ಸೋನಾ ಮತ್ತು ಸ್ಟೀಮ್‍ಬಾತ್, ಡುಶ್ ಪ್ಯಾಕ್, ಮ್ಯಾಗ್ನೆಟೊ ಥೆರಪಿ, ಫಿಜಿಯೋಥೆರಪಿ, ಅಕ್ಯುಪಂಕ್ಚರ್ & ಅಕ್ಯುಪ್ರೆಶರ್, ವ್ಯಾಯಾಮ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಣ್ಣು ಚಿಕಿತ್ಸೆಯಂಥ ಸೌಲಭ್ಯಗಳು ಲಭ್ಯವಿದ್ದು, ವಿಶಾಲವಾದ, ಗಾಳಿ ಬೆಳಕು ಸಮೃದ್ಧವಾದ ಯೋಗ ಸಭಾಂಗಣ, ಸ್ವಚ್ಛ ಮತ್ತು ಸುರಕ್ಷಿತ ಕ್ರಿಯಾ ಕೊಠಡಿಗಳು ಇರುತ್ತವೆ ಎಂದು ವಿವರಿಸಿದರು.

ಸಮಗ್ರ ಹಾಗೂ ಔಷಧರಹಿತ ಚಿಕಿತ್ಸೆ, ಅನುಭವ ಸಂಪನ್ನ ವೈದ್ಯರು ಮತ್ತು ಚಿಕಿತ್ಸಕರ ಸೇವೆ, ವೈಯಕ್ತಿಕ ಚಿಕಿತ್ಸಾ ಯೋಜನೆಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ, ಚೇತರಿಕೆ ಮತ್ತು ಪುನಶ್ಚೇತನಕ್ಕೆ ಪೂರಕ ಪ್ರಶಾಂತ ವಾತಾವರಣದಂಥ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಕೇಂದ್ರಕ್ಕೆ ಆಗಮಿಸುವ ಅತಿಥಿಗಳಿಗೆ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆಯೂ ಇರುತ್ತದೆ ಎಂದರು.

ಚಿತ್ರದುರ್ಗದ ಉದ್ಯಮಿ ಸುರೇಶ್‍ಬಾಬು ಅವರು ಮಾತನಾಡಿ, ಪ್ರಕೃತಿ ಚಿಕಿತ್ಸೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಎಲ್ಲ 35 ವಾರ್ಡ್‍ಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವುದಾಗಿ ಪ್ರಕಟಿಸಿದರು.

ಸಾಮಾನ್ಯ ವಾರ್ಡ್, ವಿಶೇಷ ಕೊಠಡಿ ಮತ್ತು ಸುಸಜ್ಜಿತ ಕಾಟೇಜ್ ಹೀಗೆ ವೈವಿಧ್ಯಮಯ ಶ್ರೇಣಿಯ ವ್ಯವಸ್ಥೆಯಲ್ಲಿ ಅತಿಥಿಗಳು ತಮ್ಮ ಆದ್ಯತೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಅತ್ಯಾಧುನಿಕ ಪ್ರಕೃತಿ ಚಿಕಿತ್ಸಾ ಕೇಂದ್ರ ಮುಂದಿನ ದಿನಗಳಲ್ಲಿ ಈ ಭಾಗದ ಆರೋಗ್ಯ ಪ್ರವಾಸೋದ್ಯಮ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ವಿವರಗಳಿಗೆ: 93530-63097/ 8317363097 ಸಂಪರ್ಕಿಸಬಹುದು. ಸಂಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Share This Article
error: Content is protected !!
";