ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಂಗಭದ್ರಾ ಜಲಾಶಯದ ಗೇಟ್ ರಿಪೇರಿ ಆಗುವವರೆಗೂ ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಆಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡ್ಡಿ ಮುರಿದಂತೆ ಹೇಳಿದರು.
ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.
ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಬಳಿಕ ಮಾತನಾಡಿ, ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಆಗುವುದಿಲ್ಲ. ಇರುವಂತಹ ನೀರನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂಬ ಜವಾಬ್ದಾರಿ ಅವರಿಗೆ ಬಿಟ್ಟಿದ್ದೇನೆ. ಡ್ಯಾಂ ಕಾಲುವೆಗಳ ರಿಪೇರಿ ಮಾಡುವ ಬಗ್ಗೆಯೂ ತೀರ್ಮಾನ ಮಾಡಿದ್ದೇವೆ. ಇತರ ವಿಚಾರಗಳ ಬಗ್ಗೆ ತುಂಗಭದ್ರಾ ಡ್ಯಾಂ ಚೇರ್ಮನ್ ಹಾಗೂ ಸದಸ್ಯರು ಅಭಿಪ್ರಾಯ ತಿಳಿಸುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು, ರೈತರು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶಾಸಕರು, ರೈತರ ಸಲಹೆ ಪಡೆಯಲಾಗಿದೆ. ತುಂಗಭದ್ರಾ ಅಣೆಕಟ್ಟಿನ 8 ಗೇಟ್ಗಳು ಸ್ಟ್ರಕ್ ಆಗಿವೆ. ಅದನ್ನು ಸರಿಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ, 105 ಟಿಎಂಸಿ ನೀರು ಸ್ಟೋರ್ ಮಾಡಲು ಆಗಲ್ಲ. ಕೇವಲ 80 ಟಿಎಂಸಿ ನೀರು ಹಿಡಿದಿಡಲಾಗಿದೆ ಎಂದು ತಿಳಿಸಿದರು.
ಎರಡನೇ ಬೆಳೆಗೆ 60 ಟಿಎಂಸಿ ನೀರು ಬೇಕು. ಈಗ 75 ಟಿಎಂಸಿ ನೀರು ಮಾತ್ರ ಇದೆ. ಇದರಲ್ಲಿ 35% ಅಷ್ಟೇ ನಮ್ಮ ಪಾಲು. ಜನವರಿ 10ರ ವರೆಗೆ ನೀರು ಬಿಡುತ್ತೇವೆ. ಪ್ರತಿದಿನ 4,500 ಕ್ಯೂಸೆಕ್ ನೀರು ಬಿಡಲಾಗುವುದು ಎಂದರು.
ದಾರಿ ತಪ್ಪಿಸುವುದು ಬೇಡ:
ಎರಡನೇ ಬೆಳೆಗೆ ನಾವು ನೀರು ಕೊಡುವುದಿಲ್ಲ. ನಂತರ 18 ಟಿಎಂಸಿ ನೀರು ಉಳಿಯಬಹುದು. ಡಿಸೆಂಬರ್ ಎರಡನೇ ವಾರದಲ್ಲಿ 33 ಗೇಟ್ ರಿಪೇರಿ ಮಾಡಲಾಗುವುದು. ಹೊಸದಾಗಿ ಗೇಟ್ ಕೂರಿಸುವ ಕೆಲಸ ಆಗಲಿದೆ. ಜೂನ್ 26ರೊಳಗೆ ಗೇಟ್ ಅಳವಡಿಕೆ ಮಾಡಲಾಗುವುದು. ಮುಂದಿನ ಮಳೆಗಾಲಕ್ಕೆನೀರು ಕೂಡುತ್ತೇವೆ.
ಕಾರ್ಖಾನೆಗೆ, ಕುಡಿಯುವ ನೀರನ್ನು ಕೊಡುತ್ತೇವೆ. ಎಡ, ಬಲ ಕಾಲುವೆ ನಾವು ದುರಸ್ತಿ ಮಾಡುತ್ತೇವೆ. ನಮಗೆ ಡ್ಯಾಂ ಮುಖ್ಯ. ಅದಕ್ಕೆ ರೆಡಿ ಮಾಡಬೇಕು. ರೆಡಿ ಮಾಡಿಲ್ಲ ಅಂದರೆ, ಮುಂದೆ ಅಪಾಯ ಆಗುತ್ತದೆ. ಗೇಟ್ ಮುಖ್ಯ, ಡ್ಯಾಂ ಮುಖ್ಯ. ಮುಖಂಡರು ರೈತರ ದಾರಿ ತಪ್ಪಿಸುವುದು ಬೇಡ. ನಿಮ್ಮ ಪಕ್ಷದ ನಾಯಕರು ಡ್ಯಾಂ ಗೇಟ್ ರಿಪೇರಿಗೆ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಎನ್.ಎಸ್. ಬೋಸರಾಜು, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಹಂಪನಗೌಡ ಬಾದರ್ಲಿ, ನಾಗೇಂದ್ರ, ಗಣೇಶ್, ಜನಾರ್ದನ ರೆಡ್ಡಿ, ಬಸನಗೌಡ ದದ್ದಲ್, ಎಂಎಲ್ಸಿಗಳಾದ ವಸಂತಕುಮಾರ್, ಬಸವನಗೌಡ ಬಾದರ್ಲಿ ಮತ್ತಿತರರು ಭಾಗವಹಿಸಿದ್ದರು.

