ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿದ್ಯಾರ್ಥಿಗಳಿಗೆ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿವೆ ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಹೇಳಿದರು.
ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಚಿತ್ರದುರ್ಗ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದರು.
ಹಿಂದಿನ ಪೂರ್ವಜ್ಜರ ಸಂಪ್ರದಾಯಗಳು ಆಚರಣೆಗಳು ಮೌಲ್ಯಗಳು ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಸಹಾಯ ಮಾಡುತ್ತವೆ.
ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ ಹಾಡುಗಾರಿಕೆ ನಾಟಕ ಸಂಗೀತ ಮತ್ತು ಕ್ರೀಡೆಗಳು ವ್ಯಕ್ತಿ ವಿಕಾಸನಕ್ಕೆ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ನಮ್ಮ ಚಳ್ಳಕೆರೆ ತಾಲೂಕ್ ಆರ್ಥಿಕವಾಗಿ ಬಡತನ ಇರಬಹುದು ಆದರೆ ಜನಪದ ಸಾಹಿತ್ಯ ಸಂಸ್ಕೃತಿ ಮತ್ತು ಕಲೆಗಳಲ್ಲಿ ಶ್ರೀಮಂತಿಕೆಯನ್ನೊಂದಿದೆ. ತಾಲ್ಲೂಕಿನ ಸಿರಿಯಜ್ಜಿ ಯಾವುದೇ ಅಕ್ಷರ ಜ್ಞಾನ ಹೊಂದಿಲ್ಲದೆ ನೂರಾರು ಜನಪದ ಮತ್ತು ಶೋಭಾನೆ ಪದಗಳನ್ನು ಹಾಡಿ ಜನಪದ ಶ್ರೀ. ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡು ರಾಜ್ಯ ಜಿಲ್ಲೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಸ್ಮರಿಸಿದರು.
ಟಿವಿ ಮೊಬೈಲ್ ಬಳಕೆಯಿಂದ ಜನಪದ ಕಲೆ ರಂಗಭೂಮಿ ಕಲೆ ಸಂಸ್ಕೃತಿ ಮಾಯವಾಗುತ್ತಿರುವುದು ಒಂದು ವಿಪರ್ಯಾಸ ಸಂಗತಿ. ಭಾರತ ದೇಶವು ಪ್ರಪಂಚದಲ್ಲಿಯೇ ಒಂದು ವೈವಿಧ್ಯಮಯ ಮತ್ತು ಸಂಸ್ಕೃತಿಯನ್ನು ಒಳಗೊಂಡ ದೇಶವಾಗಿದೆ. ಹಿಂದಿನ ಸಂಪ್ರದಾಯ ಆಚರಣೆ ಕಲೆ ಮತ್ತು ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲಾರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಕೆ.ಎನ್ ವಸಂತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಸಹಾಯವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಕೌಶಲ್ಯವನ್ನು ಪ್ರದರ್ಶಿಸಿ ಜಯಗಳಿಸಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಕೆ. ಹೆಚ್. ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ ಸೋಲೇ ಗೆಲುವಿನ ಸೋಪಾನ ಎಂದರು. ಕಾಲೇಜಿನ ಉಪನ್ಯಾಸಕರ ಮತ್ತು ಸಿಬ್ಬಂದಿ ವರ್ಗದ ಸಹಕಾರದಿಂದ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಫಲಿತಾಂಶ ಹೆಚ್ಚಿಸುವುದಕ್ಕೆ ಶ್ರಮಿಸುತ್ತೇನೆ ಎಂದರು.
ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸಾಹಿತಿ ಬೆಳಗಟ್ಟ ನಾಗರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಮಂಜ ನಾಯ್ಕ್, ಎರಿಸ್ವಾಮಿ, ಚಂದ್ರಪ್ಪ, ಕಾಲೇಜಿನ ಏಕೋ ಕ್ಲಬ್ ಕಾರ್ಯದರ್ಶಿ ಹೆಚ್.ಆರ್ ಜಬಿವುಲ್ಲಾ, ಎನ್ಎಸ್ಎಸ್ ಅಧಿಕಾರಿ ಶಾಂತಕುಮಾರಿ, ಉಪನ್ಯಾಸಕರಾದ ಕುಮಾರಸ್ವಾಮಿ, ಪುಟ್ಟರಂಗಪ್ಪ, ಹನುಮಂತಪ್ಪ, ಲತಾದೇವಿ, ಲತಾ, ರಾಣಿ, ಆಶಾ ರಾಣಿ, ಸಹಿದಾ ಹೀನಾ ಕೌಸರ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಕಾಲೇಜಿನಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ವನಶ್ರೀ ಪದ್ಮಶ್ರೀ. ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಆಚರಿಸಲಾಯಿತು.

