ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅದ್ಯಾವ ಘಳಿಗೆಯಲ್ಲಿ ಅರಣ್ಯ ಸಚಿವರಾದರೋ ಈಶ್ವರ್ ಖಂಡ್ರೆ ಎಂದು ಜೆಡಿಎಸ್ ಟೀಕಿಸಿದೆ.
ರಾಜ್ಯದಲ್ಲಿ ಕಾಡುಪ್ರಾಣಿಗಳಿಗೆ ಉಳಿಗಾಲವೇ ಇಲ್ಲದಂತಾಗಿದೆ !
ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು – ಮಾನವ ಸಂಘರ್ಷ ಮಿತಿಮೀರಿದೆ. ಆನೆ, ಹುಲಿ ಮತ್ತು ಚಿರತೆ ದಾಳಿಗೆ ಜನರು ಬಲಿಯಾಗುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಆನೆ ದಾಳಿಗೆ ಹಲವು ರೈತರು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ಒಂದೇ ತಿಂಗಳಲ್ಲಿ ಹುಲಿ ದಾಳಿಗೆ ಮೂವರ ಬಲಿಯಾಗಿದ್ದರು.
ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಹುಲಿಗಳ ಹಾವಳಿಗೆ ಬೇಸತ್ತು ಸ್ಥಳೀಯರೇ ವಿಷವಿಟ್ಟು ಹುಲಿಗಳನ್ನು ಕೊಂದಿದ್ದರು.
ತುಮಕೂರಿನಲ್ಲೂ ಕೆಲ ತಿಂಗಳ ಹಿಂದೆ ನವಿಲುಗಳಿಗೆ ವಿಷವಿಟ್ಟು ಕೊಲ್ಲಲಾಗಿತ್ತು. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ 19 ಜಿಂಕೆಗಳ ಮಾರಣಹೋಮವಾಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅರಣ್ಯ ಪ್ರದೇಶಗಳ ಒತ್ತುವರಿ ಮತ್ತು ಅಕ್ರಮವಾಗಿ ರೆಸಾರ್ಟ್, ಹೋಮ್‌ಸ್ಟೇ ನಿರ್ಮಾಣದಿಂದ ಕಾಡುಪ್ರಾಣಿಗಳು ಮತ್ತು ಜನರ ಸಂಘರ್ಷ ಜೋರಾಗಿದೆ. ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಜೆಡಿಎಸ್ ತಾಕೀತು ಮಾಡಿದೆ.

