ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಹಾರದ ಪ್ರಭುದ್ಧ ಮತದಾರರು ಕಾಂಗ್ರೆಸ್ ಪಕ್ಷದ ‘ವೋಟ್‌ಚೋರಿ‘ ಸುಳ್ಳು ಸಂಕಥನಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ‘ ಸಂಕಲ್ಪಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್‌ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸುಳ್ಳಿನ ಕಥೆಗಳನ್ನೇ ಸೃಷ್ಟಿಸಿ ಅಪಪ್ರಚಾರ ನಡೆಸಿತು. ಅದು ನಿಷ್ಫಲವಾಗಿದೆ.
ಈ ದಿಗ್ವಿಜಯ ಸಾರ್ವಕಾಲಿಕ ದಾಖಲೆ. ಸ್ವಾತಂತ್ರ್ಯೋತ್ತರ ಭಾರತದಲ್ಲೇ ಹಿಂದೆಂದೂ ಕಂಡಿರದ ದಾಖಲೆ ವಿಜಯ. ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ ಫಲಿತಾಂಶ ಮರುಕಳಿಸಲಿದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಜೆಡಿಎಸ್, ಬಿಜೆಪಿ ಈ ಗುರಿಯನ್ನು ಮುಟ್ಟೇ ಮುಟ್ಟುತ್ತವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಅವರೊಂದಿಗೆ NDA ಮೈತ್ರಿಕೂಟದ ಜಯಕ್ಕಾಗಿ ಅವಿರತವಾಗಿ ದುಡಿಮೆ ಮಾಡಿದ ಗೃಹ ಸಚಿವರಾದ ಅಮಿತ್ ಶಾ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಮತ್ತು ಜತಿನ್ ರಾಮ್ ಜೀ ಅವರು ಹಾಗೂ ಬಿಹಾರ ರಾಜ್ಯದ ಎಲ್ಲಾ ಮತದಾರರಿಗೆ ಕುಮಾರಸ್ವಾಮಿ ಅವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

