ಹಸಿರು ಮತ್ತು ಸೇವೆ ಮೂಲಕ ಜಗಮೆಚ್ಚಿದ ನಾಯಕಿ ಸಾಲುಮರದ ತಿಮ್ಮಕ್ಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲುಮರದ ತಿಮ್ಮಕ್ಕ ಎಂಬ ಹೆಸರು ಕೇಳಿದರೆ, ಹಸಿರು ಮತ್ತು ಸೇವೆ ಎಂಬ ಎರಡು ಪದಗಳು ನೆನಪಿಗೆ ಬರುತ್ತವೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ತಿಮ್ಮಕ್ಕನವರು ಬಾಲ್ಯದಿಂದಲೇ ಕಷ್ಟಗಳ ನಡುವೆ ಬೆಳೆದವರು.

ನಂತರ ಅಂಬುಗೇರೆಯ ಚಿಕ್ಕಯ್ಯನವರ ಜೊತೆ ಜೀವನ ಆರಂಭವಾದರೂ, ಮಕ್ಕಳಿಲ್ಲ ಎಂಬ ನೋವು ಅವರಿಗೆ ತುಂಬ ಕಾಡಿತು. ಆದರೆ ಅವರು ಆ ನೋವನ್ನು ದುಃಖವಾಗಿ ಕಟ್ಟಿಕೊಂಡಿರಲಿಲ್ಲ; ಬದಲಿಗೆ, ಗಿಡಗಳನ್ನು ಮಕ್ಕಳಂತೆ ಬೆಳೆಸಬೇಕೆಂದು ತೀರ್ಮಾನಿಸಿದರು.

- Advertisement - 

ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗಳು ಅಂಬುಗೇರೆಯಿಂದ ಸಾಗುವ ರಸ್ತೆಯ ಬದಿಯಲ್ಲಿ ಗಿಡ ನೆಡುವುದನ್ನು ಶುರುಮಾಡಿದರು. ಪ್ರತಿದಿನ ದೂರ ನಡೆದು ನೀರು ತೆಗೆದುಕೊಂಡು ಹೋಗುವುದು, ಗಿಡಗಳಿಗೆ ಕಾವಲಿರುವುದು ಇವೆಲ್ಲವೂ ಅವರ ದಿನನಿತ್ಯದ ಕೆಲಸವಾಗಿತ್ತು.

ಬಿಸಿಲು, ಮಳೆ, ಬಡತನ ಯಾವದೂ ಅವರಿಗೆ ಅಡ್ಡಿಯಾಗಲಿಲ್ಲ. ಗಿಡ ಬೆಳೆದರೆ ಪ್ರಕೃತಿ ಉಳಿಯುತ್ತದೆ ಎಂಬ ನಂಬಿಕೆ ಅವರದ್ದು. ಇಂದು ಅವರು ಬೆಳೆಸಿರುವ ನೂರಾರು ಸಾಲುಮರಗಳು ಆ ರಸ್ತೆಯನ್ನು ಹಸಿರಿನಿಂದ ತುಂಬಿವೆ.
ಅವರ ಕೆಲಸವನ್ನು ನೋಡಿ ದೇಶವೇ ಇವರ ಕಡೆ ತಿರುಗಿ ನೋಡಿತು. ಅವರು ಜಗಮೆಚ್ಚಿದ ನಾಯಕಿಯಾದರು.  ಆದರೂ ತಿಮ್ಮಕ್ಕನವರ ಸರಳತೆ ಎಂದಿಗೂ ಬದಲಾಗಲಿಲ್ಲ. ಮರ ಉಳಿದರೆ ಮನುಷ್ಯ ಉಳಿಯುತ್ತಾನೆಎಂಬ ಸರಳ ಸಂದೇಶವನ್ನೇ ಅವರು ತಮ್ಮ ಜೀವನದ ಮೂಲಕ ಎಲ್ಲರಿಗೂ ಕಲಿಸಿದರು.

- Advertisement - 

ಇವರು ಮಾಡಿರುವ ಸಾಧನೆಗೆ ಅನೇಕ ಪ್ರಶಸ್ತಿಗಳು ಇವರ ಮಡಿಲಿಗೆ ಬಂದು ಸೇರಿದ್ದಾವೆ. ಅವುಗಳೆಂದರೆ 1995 ನ್ಯಾಷನಲ್ ಸಿಟಿಜನ್ ಪ್ರಶಸ್ತಿ, 1997 ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 2010 ರಲ್ಲಿ ಹಂಪಿ ವಿಶ್ವಾವಿದ್ಯಾಲಯದಿಂದ ನಾಡೋಜ ಪ್ರಶಸ್ತಿ,

ರಾಜ್ಯ ಸರ್ಕಾರವು ಇವರನ್ನು ಪರಿಸರದ ರಾಯಭಾರಿ ಯಾಗಿ ನೇಮಕ ಮಾಡಲಾಯಿತು.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ನಂತರ 2019ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ ಸಹ ಗೌರವಿಸಲಾಯಿತು.

ತಿಮ್ಮಕ್ಕನವರ ಸೇವೆ ನಮಗೆ ಹೇಳುವುದು ಒಂದೇ ಒಂದು ಮಾತು. ಗಿಡ ನೆಡುವುದು ದೊಡ್ಡ ಕೆಲಸವಲ್ಲ, ಆದರೆ ಗಿಡ ಬೆಳೆಸುವುದು ದೊಡ್ಡ ಜವಾಬ್ದಾರಿ.
ಲೇಖನ: ಹರಿಯಬ್ಬೆ ನಾಗಭೂಷಣ. ಡಿ.  9741831411

 

Share This Article
error: Content is protected !!
";