ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಅಂಗನವಾಡಿ ಕಾರ್ಯಕರ್ತೆಯರ ಸಂಘಟಕಿ, ಸಿಐಟಿಯು ನಾಯಕಿ ಎಸ್.ವರಲಕ್ಷ್ಮಿ ಅವರನ್ನು ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲಾಗಿದ್ದು ಸಾಮಾಜಿಕ, ರೈತ, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರಿಗೆ ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಪ್ರಥಮದಲ್ಲಿ ಮಹಿಳಾ ಹೋರಾಟಗಾರ್ತಿಗೆ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಪರವಾಗಿ ಡಾ.ರವಿಶಂಕರ್ ನುಲೇನೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಸ್ ವರಲಕ್ಷ್ಮಿ ಅವರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದವರು. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಮಡಿಕೆ ತಯಾರಿಕೆ ಅವರ ಕುಟುಂಬದ ಕುಲಕಸುಬು. ಒಂದು ಹೊತ್ತಿನ ಊಟಕ್ಕೂ ಇಡೀ ಕುಟುಂಬ ದುಡಿಯಬೇಕಾಗಿದ್ದ ಸ್ಥಿತಿಯ ಕಾರಣ ಪದವಿ ವಿದ್ಯಾಭ್ಯಾಸ ಗಗನಕುಸುಮವಾಗಿತ್ತು. ಚೆನ್ನಾಗಿ ಓದಿ ಅಪ್ಪ-ಅಮ್ಮನ ಕಷ್ಟ ನಿವಾರಿಸಬೇಕೆಂದುಕೊಂಡಿದ್ದ ವರಲಕ್ಷ್ಮಿ ಅವರ ಕನಸು ನನಸಾಗಲಿಲ್ಲ. ಆದರೆ, ಬಡತನವನ್ನು ಮೀರಬೇಕೆಂಬ ಮಹತ್ವಾಕಾಂಕ್ಷೆ, ಛಲ ಅವರನ್ನು ದಿಟ್ಟ ಹೋರಾಟಗಾರ್ತಿಯಾಗಿ ರೂಪಿಸಿತು.
ಬರಗಾಲದ ಕಾರಣ ವರಲಕ್ಷ್ಮಿ ಅವರ ಕುಟುಂಬವು ತಾಯಿಯವರ ತವರುಮನೆ ಬೆಂಗಳೂರಿನ ಕುಂಬಳುಗೋಡಿಗೆ ಬಂದು ನೆಲೆಸಿತು. ಹಣದ ತೊಂದರೆ ಇದ್ದ ಕಾರಣ ವರಲಕ್ಷ್ಮಿ ಅವರು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಅಲ್ಲಿಂದ ಯೂನಿಯನ್ ಸಂಪರ್ಕಕ್ಕೆ ಬಂದರು. ನಾನಾ ಹೋರಾಟಗಳಲ್ಲಿ ಭಾಗಿಯಾದ ಅವರು ಜೈಲುವಾಸವನ್ನೂ ಅನುಭವಿಸಿದರು. ಕೆಲಸ ಬಿಟ್ಟು ಪೂರ್ಣಾವಧಿಗೆ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸುವ ಜವಾಬ್ದಾರಿ ಹೊತ್ತರು. 40 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಗೌರವಧನ ಹೆಚ್ಚಳಕ್ಕೆ ಹೋರಾಡಿ ಯಶಸ್ಸು ಕಂಡಿದ್ದು ಮರೆಯಲಾಗದ ಸಾಧನೆ.

