ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಅಣೆಕಟ್ಟು ನಿರ್ಮಾಣಕ್ಕೆ ಕಾರಣರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರನ್ನು ಇಡೀ ಕರ್ನಾಟಕ ಜನತೆ ಸ್ಮರಿಸಿಕೊಳ್ಳಬೇಕು ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.
ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಹಿನ್ನಿರಿನ ಆರನಕಣಿವೆ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪ ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ನಾನಾ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ವಿವಿ ಸಾಗರಕ್ಕೆ ಬಾಗಿನ ಅರ್ಪಣೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
4 ನೇ ಬಾರಿಗೆ ವಾಣಿ ವಿಲಾಸ ಸಾಗರ ಕೋಡಿ ಬಿದ್ದು ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಣೆ ಜೊತೆಗೆ ಈ ಕುರಿತ ಸ್ಮರಣೆಗಾಗಿ ಕವಿಗೋಷ್ಠಿ ಆಯೋಜಿಸಿರುವುದು ಉತ್ತಮ ಕಾರ್ಯ. ಕನ್ನಡದ ಮನಸ್ಸುಗಳು ಸೇರಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಈ ಕವಿಗೋಷ್ಠಿ ಒಂದು ಉತ್ತಮ ಪ್ರಯತ್ನ ಎಂದರು.
ಪ್ರಕೃತಿಯ ಮಡಿಲಿನಲ್ಲಿ ಭಾವಯಾನ ವೇದಾವತಿ ಮೈದುಂಬಿರುವಾಗ ಬಾಗಿನ ಸಮರ್ಪಿಸಿ ಉದ್ಘಾಟನೆ ಮಾಡುತ್ತಿರುವುದು ಕನ್ನಡ ನೆಲದ ಸಂಸ್ಕೃತಿಗೇ ಸಂಸ್ಕಾರಕ್ಕೆ ಕಲಶವಿಟ್ಟಂತೆ.
ಚಿತ್ರದುರ್ಗ ಜಿಲ್ಲೆ ತರಾಸು ತಳುಕಿನ ವೆಂಕಣ್ಣಯ್ಯ, ಬೆಳಗೆರೆ ಕೃಷ್ಣಶಾಸ್ತ್ರಿ, ಬಿ.ಎಲ್.ವೇಣುರವರಂಥ ಹತ್ತು ಹಲವಾರು ಕನ್ನಡ ಸಾಹಿತ್ಯ ದಿಗ್ಗಜರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಇಂಥಹ ಕವಿ ಗೋಷ್ಠಿಗಳು, ಕಮ್ಮಟಗಳು ಮುಂದಿನ ದಿನಗಳಲ್ಲಿ ಹಲವು ಪ್ರತಿಭೆಗಳನ್ನು ಹೊರತರುವ ಭರವಸೆ ಮೂಡಿಸುತ್ತಿದೆ. ಕನ್ನಡ ಭಾಷೆ ಹೆಚ್ಚು ಹೆಚ್ಚು ಬಳಸಿ ಬೆಳೆಸುವ ಹಿರಿಯ ಹೊಣೆ ಪ್ರತಿಯೊಬ್ಬ ಕನ್ನಡಿಗನದಾಗಬೇಕಿದೆ ಎಂದು ಶಶಿಕಲಾ ಹೇಳಿದರು.
ವಿಶ್ವ ಕನ್ನಡ ಕಲಾ ಸಂಸ್ಥೆ ಸ್ಥಾಪಕ ಅಧ್ಯಕ್ಷ ಈ ರವೀಶ ಅಕ್ಕರ ಮಾತನಾಡಿ ಕವಿಗೋಷ್ಠಿ ನಮ್ಮ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿದೆ. ಕವಿ ಗೋಷ್ಠಿ, ಕಮ್ಮಟಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಗೆ ಶಕ್ತಿಮೀರಿ ಕೆಲಸ ಮಾಡುತ್ತೇವೆ. ವಿವಿ ಸಾಗರಕ್ಕೆ ಬಾಗಿನ ಅರ್ಪಣೆ ಮತ್ತು ಕವಿಗೋಷ್ಠಿ ಪುಸ್ತಕ ಬಿಡುಗಡೆ ಸಮಾರಂಭ ಮೂಕ ಕನ್ನಡ ಭಾಷೆಗೆ ಅಳಿಲು ಸೇವೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ ಹಾಗೂ ವಿಜಯ ಕಿರಣ ಪರಿಸರ ಜಾಗೃತಿ ಸಂಸ್ಥೆಗಳ ಸಹಯೋಗದಲ್ಲಿ ಜೀವನಾಡಿ ವಾಣಿವಿಲಾಸ ಸಾಗರ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೆಂಪರಾಜಮ್ಮಣ್ಣಿ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ಜಿಲ್ಲೆಯ ಜೀವನಾಡಿ ವೇದಾವತಿ ನದಿಗೆ ಬಾಗಿನ ಅರ್ಪಣೆ, ಹಾರನ ಕಣಿವೆ ರಂಗಪ್ಪ ದೇವಸ್ಥಾನದ ಹತ್ತಿರ ಹಿನ್ನೀರಿನಲ್ಲಿ ಅರ್ಪಿಸಿ ತಾಯಿ ವೇದಾವತಿಗೆ ಪೂಜಿಸಿ ಪ್ರಾರ್ಥಿಸಲಾಯಿತು.
ಕವಿಗಳು ಇನ್ನೊಬ್ಬರ ದ್ವನಿಗೆ ಕಿವಿಯಾದರೆ ಮಾತ್ರ ಉತ್ತಮ ಕವಿತೆಗಳು ಮೂಡಿಬರಲು ಸಾಧ್ಯ. ವಾಣಿ ವಿಲಾಸ ಜಲಾಶಯದ ಮೇಲೆ ಕವಿಗಳು ಬರೆದಿರುವ ಕವನಗಳು ವಾಣಿವಿಲಾಸದ ಗತವೈಭವವನ್ನು ಸಾರಿ ಹೇಳುತ್ತಿವೆ. ಇಂತಹ ಕವಿಗೋಷ್ಠಿಗಳಲ್ಲಿ ಕವಿಗಳು ಭಾಗವಹಿಸಿ ಕವಿತೆ ವಾಚನ ಮಾಡಿದಾಗ ಮಾತ್ರ ಉತ್ತಮ ಕವಿಗಳಾಗಲು ಸಾಧ್ಯ. ಮಾನವನ ಭಾವನೆಗಳಿಗೆ ಜೀವ ತುಂಬುವ ಶಕ್ತಿ ಇರುವುದು ಕವಿಗಳಿಗೆ ಮಾತ್ರ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಮಹೇಶ್ ಕಡ್ಲೇಗುದ್ದು ತಿಳಿಸಿದರು.
ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಜಹರ್ ಉಲ್ಲಾ ಎನ್, ಜಿಲ್ಲಾಧ್ಯಕ್ಷ ಡಾ.ನವೀನ್ ಸಜ್ಜನ್, ವಿನಾಯಕ, ಡಾ ನವೀನ್ ಮಸ್ಕಲ್, ಶ್ರೀನಿವಾಸ್ ಮಳಲಿ, ದೇವೇಂದ್ರಪ್ಪ ಕುಂಚಿಗನಾಳ ಜಿಲ್ಲೆಯ ಸುಮಾರು 60 ಕವಿಗಳು ಹಾಜರಿದ್ದ ಪರಿಸರ ಮಡಿಲಲ್ಲಿ ಚೇರು ಶಾಮಿಯಾನ ಇಲ್ಲದೆ ಯಶಸ್ವಿ ಕಾರ್ಯಕ್ರಮ ನಡೆಯಿತು.
ವಿನಾಯಕ ನಿರೂಪಿಸಿದರು. ಡಾ. ನವೀನ್ ಸಜ್ಜನ್ ಸ್ವಾಗತಿಸಿದರು.

