ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂರ್ಛೆರೋಗವು ಮೆದುಳು ಮತ್ತು ನರಗಳಿಗೆ ಸಂಬಂಧಿಸಿದ ರೋಗವಾಗಿದೆ. ಮೂರ್ಛೆರೋಗದ ಬಗ್ಗೆ ಮೂಢನಂಬಿಕೆ ಬಿಡಿ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಜಿ.ಓ.ನಾಗರಾಜ್ ಹೇಳಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಕರ್ನಾಟಕ ಮೆದುಳು ಉಪಕ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂರ್ಛೆರೋಗ ಬಂದಾಗ ರೋಗಿಯು ಕೆಳಗಡೆ ಬಿದ್ದು ಕೈಕಾಲು ಅಲ್ಲಾಡಿಸುವುದು, ಬಾಯಿಯೊಳಗೆ ನೊರೆ ಬರುವುದು, ಈ ಸಮಯದಲ್ಲಿ ರೋಗಿಗೆ ಆರೈಕೆ ಮುಖ್ಯ, ರೋಗಿಯ ಕೈಯಲ್ಲಿ ಕಬ್ಬಿಣ ಕೊಡುವುದು ಏನು ಮಾಡಬಾರದು, ಗಾಳಿ ಬೆಳಕು ಇರುವಂತೆ ನೋಡಿಕೊಂಡು ನಾಲಿಗೆ ಕಚ್ಚದಂತೆ ಆರೈಕೆ ಮಾಡಿದರೆ ನಾಲ್ಕೈದು ನಿಮಿಷದಲ್ಲಿ ತಾನಾಗಿಯೇ ರೋಗಿಯು ಮೂರ್ಚೆಯಿಂದ ಹೊರ ಬರುತ್ತಾನೆ ಎಂದರು.
ಮೂರ್ಛೆರೋಗ ಅನುವಂಶಿಕವಲ್ಲ, ಮಾನಸಿಕ ಆರೋಗ್ಯ ಕಾರ್ಯಕ್ರಮ ದಡಿಯಲ್ಲಿ ರೋಗಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾದ ಔಷಧಿ ಲಭ್ಯವಿದ್ದು, ರೋಗಲಕ್ಷಣ ಇರುವವರು ವೈದ್ಯರಲ್ಲಿ ಪರೀಕ್ಷಿಸಿ, ತಪ್ಪು ಕಲ್ಪನೆಗಳಿಗೆ ಕಿವಿಗೊಡದೆ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗುವುದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಒತ್ತಡದ ಜೀವನದಲ್ಲಿ ಅನಿಯಮಿತ ಮೆದುಳಿನ ಚಟುವಟಿಕೆಯಿಂದ ಗಂಡು ಹೆಣ್ಣೆಂಬ ಭೇದವಿಲ್ಲದೆ ರೋಗಗಳು ಬರುತ್ತಿದ್ದು, ಮೂರ್ಛೆರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು, ರೋಗದಿಂದ ಬಳಲುವವರೆಗೆ ಬೆಂಬಲ ನೀಡಲು, ಅವರು ಉತ್ತಮ ಜೀವನ ನಡೆಸುವಂತೆ ಪ್ರೋತ್ಸಾಹಿಸಲು, ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡಲು ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಆಚರಿಸಲಾಗುತ್ತಿದ್ದು, ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಕಾಲಕ್ಕೆ ನಿದ್ರೆ, ಒತ್ತಡದಿಂದ ದೂರ ಇರುವುದು, ತಲೆಗೆ ಗಾಯ ಆಗದಂತೆ ನೋಡಿ ಕೊಂಡಲ್ಲಿ ಅಪಸ್ಮಾರದಿಂದ ದೂರ ಇರಬಹುದು ಎಂದರು.
ಮಾನಸಿಕ ಆರೋಗ್ಯ ಕಾರ್ಯಕ್ರಮ ದಡಿಯಲ್ಲಿ ಅಪಸ್ಮಾರದ ಕುರಿತು ನಸಿರ್ಂಗ್ ವಿದ್ಯಾರ್ಥಿಗಳಿಗೆ ಚಿತ್ರ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ಪ್ರಕಾಶ್ ನೋಡಲ್ ಅಧಿಕಾರಿಗಳು ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಇವರು ಬಹುಮಾನ ವಿತರಿಸಿದರು. ಸ್ಪರ್ಧೆಯಲ್ಲಿ ದಿವ್ಯಶ್ರೀ ಪ್ರಥಮ, ಲಿಖಿತ ಆರ್ ದ್ವಿತೀಯ, ಚಂದನ್ ಕೋಟಿ ತೃತೀಯ, ಪಲ್ಲವಿ ಸಮಾಧಾನಕರ ಬಹುಮಾನವನ್ನು ಪಡೆದರು. ಡಾ.ಶಿವಸಾದ್ವಿನಿ ಕರ್ನಾಟಕ ಮೆದುಳು ಉಪಕ್ರಮ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಅನುಸೂಯಮ್ಮ. ಕಿರಣ್ ಕುಮಾರ್, ಬೋಧಕರಾದ ತಿಪ್ಪೇಸ್ವಾಮಿ. ಸುಶ್ಮಿತಾ. ಲಲಿತ, ಜಿಲ್ಲಾ ಸಂಯೋಜಕ ಶರತ್ ಕುಮಾರ್, ಆಡಿಯೋಲಾಜಿಸ್ಟ್ ದಿವ್ಯ, ನಸಿರ್ಂಗ್ ವಿದ್ಯಾರ್ಥಿಗಳು ಹಾಜರಿದ್ದರು.

