ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ತಾಲ್ಲೂಕಿನಲ್ಲಿ ಹೊಸದಾಗಿ ಕೈಗೊಳ್ಳಲು ಯೋಜಿಸಲಾಗಿರುವ ಬೀರೇನಹಳ್ಳಿ ಹತ್ತಿರ, ಕೋಡಿಹಳ್ಳಿ ಗ್ರಾಮದ ಬಳಿ ಹಾಗೂ ದೇವರಕೊಟ್ಟ ಗ್ರಾಮದ ಬಳಿ 66/11 ಕೆ.ವಿ ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾಮಗಾರಿಗಳಿಗೆ ಈಗಾಗಲೇ ಜಮೀನು ನೀಡಲಾಗಿದ್ದು, ಸರ್ಕಾರದ ಹಂತದಲ್ಲಿ ಮಂಜೂರಾತಿಗೆ ಬಾಕಿ ಇದ್ದು, ಸರ್ಕಾರದ ಹಂತದಲ್ಲಿ ಮೊದಲನೇ ಹಂತದಲ್ಲಿ ಮಂಜೂರಾತಿಗೆ ಸಲ್ಲಿಸಲಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡು ಮಂಜೂರು ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಂಗಳೂರಿನ ವಿಕಾಸಸೌಧ ಕೊಠಡಿ ಸಂಖ್ಯೆ 343ರಲ್ಲಿ ಸೋಮವಾರ ಬೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮದ ಬಳಿ 66/11 ಕೆ.ವಿ. ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿಗೆ ಸರ್ಕಾರಿ ಭೂಮಿ ಲಭ್ಯವಿಲ್ಲದೇ ಇರುವುದರಿಂದ ಖಾಸಗಿ ಜಮೀನು ಖರೀದಿಸಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಹಿರಿಯೂರು ತಾಲ್ಲೂಕು ವಿ.ವಿ.ಸಾಗರ ಜಲಾಶಯದಿಂದ ಹಿರಿಯೂರು, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕುಗಳ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಮುಕ್ತಾಯದ ಹಂತದಲ್ಲಿರುತ್ತವೆ.
ಸದರಿ ಕಾಮಗಾರಿಗಳಿಂದ ಕುಡಿಯುವ ನೀರು ಪಂಪಿಂಗ್ ಮಾಡಲು ವೋಲ್ಟೇಜ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ, ಹಾಲಿ ಹಿರಿಯೂರು ತಾಲ್ಲೂಕು ಭರಮಗಿರಿ ವಿದ್ಯುತ್ ಉಪಕೇಂದ್ರದ 66/11 ಕೆ.ವಿ. 1*12.5 ಎಂ.ವಿ.ಎ. ಇಂದ 66/11 ಕೆ.ವಿ. 1*20 ಎಂ.ವಿ.ಎ. ಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಅಂದಾಜು ಪಟ್ಟಿಯೊಂದಿಗೆ ಸಲ್ಲಿಸಲಾಗಿದ್ದು, ಈ ಅಂದಾಜು ಪಟ್ಟಿಗೆ ಅನುಮೋದನೆ ನೀಡಿ ಕುಡಿಯುವ ನೀರು ಪೂರೈಕೆ ಹಿತದೃಷ್ಟಿಯಿಂದ ತುರ್ತಾಗಿ ಕಾಮಗಾರಿ ಕೈಗೊಳ್ಳುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.
ಅಲ್ಲದೇ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಬಳಿ ಹೊಸಳ್ಳಿ ಬ್ಯಾರೇಜ್ನಿಂದ ಧರ್ಮಪುರ ಹೋಬಳಿ 09 ಕೆರೆಗಳಿಗೆ ನೀರು ಹರಿಸುತ್ತಿದ್ದು, ಈ ಬ್ಯಾರೇಜ್ನಿಂದ ನೀರು ಪಂಪಿಂಗ್ ಮಾಡಲು ಕಲಮರಹಳ್ಳಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಪದೇ ಪದೇ ವೋಲ್ಟೇಜ್ ಸಮಸ್ಯೆ ಆಗುತ್ತಿರುವುದರಿಂದ,
ಹಾಲಿ ಇರುವ ಕಲಮರಹಳ್ಳಿ ವಿದ್ಯುತ್ ಉಪಕೇಂದ್ರದ 66/11 ಕೆ.ವಿ. 1*12.5 ಎಂ.ವಿ.ಎ. ಇಂದ 66/11 ಕೆ.ವಿ. 1*20 ಎಂ.ವಿ.ಎ. ಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಅಂದಾಜು ಪಟ್ಟಿಯೊಂದಿಗೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಕೂಡಲೇ ಕಾಮಗಾರಿ ಕೈಗೊಳ್ಳಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಅಧೀಕ್ಷಕ ಅಭಿಯಂತರ ಎಸ್.ಕೆ.ಪಟೇಲ್, ಕೆ.ಪಿ.ಟಿ.ಸಿ.ಎಲ್ ಪ್ರಭಾರಿ ಮುಖ್ಯ ಇಂಜಿನೀಯರ್ ಕಾಂತಲಕ್ಷ್ಮೀ, ಅಧೀಕ್ಷಕ ಅಭಿಯಂತರ ಜಿ.ಎಂ.ರೇವಣಸಿದ್ದಪ್ಪ, ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಇಂಜಿನೀಯರ್ ಹರೀಶ್ ಕುಮಾರ್, ಬೆಸ್ಕಾಂ ಕಾರ್ಯಪಾಲಕ ಇಂಜಿನೀಯರ್ ಅಶೋಕ್, ಎ.ಇ.ಇ ಬೆಸ್ಕಾಂ ಪೀರ್ಸಾಬ್, ಕೆ.ಪಿ.ಟಿ.ಸಿ.ಎಲ್ ಎ.ಇ.ಇ ರಿಯಾಜ್ ಮುಂತಾದ ಅಧಿಕಾರಿಗಳು ಹಾಜರಿದ್ದರು.

