200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತದೆ. ಈ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ ಸಮಾವೇಶ-2025ಕ್ಕೆ ಮುಖ್ಯಮಂತ್ರಿಗಳೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಕೈಗಾರಿಕೋದ್ಯಮಗಳ ಮಹತ್ತ್ವವನ್ನು ಅರಿತಿರುವ ನಮ್ಮ ಸರಕಾರವು
200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ. ಈ ತರಹದ ಕಂಪನಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಸಚಿವರು ತಿಳಿಸಿದರು. 

- Advertisement - 

ಕೈಗಾರಿಕೆಗಳು ಬೆಳೆಯಬೇಕು ಮತ್ತು ಹೂಡಿಕೆದಾರರು ನಮ್ಮಲ್ಲಿಗೆ ಬರಬೇಕೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಚೆನ್ನಾಗಿರಬೇಕು.

ನಮ್ಮಲ್ಲಿ 800ಕ್ಕೂ ಹೆಚ್ಚು ಆರ್ & ಡಿ ಕೇಂದ್ರಗಳು, 100ಕ್ಕೂ ಅಧಿಕ ಚಿಪ್ ವಿನ್ಯಾಸ ಕಂಪನಿಗಳು ಮತ್ತು 18,300 ನವೋದ್ಯಮಗಳು ಇವೆ. 

- Advertisement - 

ನಮ್ಮಲ್ಲಿರುವ ಆರ್ ಮತ್ತು ಡಿ ಕೇಂದ್ರಗಳು ಕೃತಕ ಬುದ್ಧಿಮತ್ತೆ, ಡೀಪ್ ಟೆಕ್, ಕ್ವಾಂಟಂ ಕಂಪ್ಯೂಟಿಂಗ್, ಸ್ಪೇಸ್-ಟೆಕ್ ಮುಂತಾದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. ಉದ್ದೇಶಿತ ಕ್ವಿನ್ ಸಿಟಿಗೆ ಕೊಟ್ಟಿರುವ 5,000 ಎಕರೆ ಜಾಗದಲ್ಲಿ ಆರ್ ಮತ್ತು ಡಿ ಕೇಂದ್ರಗಳಿಗಾಗಿ ಅಗತ್ಯವಿರುವಷ್ಟು ಸ್ಥಳವನ್ನು ಮೀಸಲಿಟ್ಟು, ಅದಕ್ಕೆ ತಕ್ಕ ಕಾರ್ಯಪರಿಸರ ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಎಂ.ಬಿ ಪಾಟೀಲ್ ಹೇಳಿದರು. 

ರಾಜ್ಯದಲ್ಲಿ ಹಲವು ತಂತ್ರಜ್ಞಾನ ಕಂಪನಿಗಳು ಎಐ, ಎಂಎಲ್ (ಮಷೀನ್ ಲರ್ನಿಂಗ್), ಕ್ವಾಂಟಂ, ರೋಬೋಟಿಕ್ಸ್, ಆಧುನಿಕ ತಯಾರಿಕೆ ಮತ್ತು ಸುಸ್ಥಿರ ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ. ಇಂತಹ ಕಂಪನಿಗಳಿಗೆ ಬೆಂಬಲ ಕೊಡಲೆಂದೇ ಸರಕಾರವು 600 ಕೋಟಿ ರೂ.ಗಳನ್ನು ಒದಗಿಸಿದೆ.

ಧಾರವಾಡದಲ್ಲಿ ಎಐ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ರಾಜ್ಯವು ಇ.ಎಸ್.ಡಿ.ಎಂ., ಸಂಚಾರ ವ್ಯವಸ್ಥೆ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಪೋಷಣೆಗೆ ಸಂಬಂಧಿಸಿದಂತೆ ಪುರೋಗಾಮಿ ನೀತಿಗಳನ್ನು ಹೊಂದಿದೆ.

ಜಪಾನ್, ಅಮೆರಿಕ, ಜರ್ಮನಿ ಮತ್ತು ಸಿಂಗಪುರದಂತಹ ರಾಷ್ಟ್ರಗಳೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಪಾಟೀಲ್ ತಿಳಿಸಿದರು.

 

 

Share This Article
error: Content is protected !!
";