ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಕಾರ್ಯಕ್ರಮವಾದ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ‘ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರೊಂದಿಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಚಾಲನೆ ನೀಡಿದರು.
ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಇದೇ ಮೊದಲ ಬಾರಿಗೆ ‘ಬೆಂಗಳೂರು ಟೆಕ್ ಸಮ್ಮಿಟ್’ ಆಯೋಜನೆಯಾಗುತ್ತಿದ್ದು, ಇದು ಸಮ್ಮಿಟ್ ನ 28ನೇ ಆವೃತ್ತಿಯಾಗಿದೆ ಎಂದು ಸಚಿವರು ಹೇಳಿದರು.
ಈ ವರ್ಷದ ಸಮ್ಮಿಟ್ಅನ್ನು ‘Futurise’ ಎಂಬ ಥೀಮ್ನೊಂದಿಗೆ ರೂಪಿಸಲಾಗಿದೆ.
ಸಮ್ಮಿಟ್ ವಿಶೇಷಗಳು:
100ಕ್ಕೂ ಹೆಚ್ಚಿನ ತಂತ್ರಜ್ಞಾನ ಗೋಷ್ಠಿಗಳು, 1200ಕ್ಕೂ ಹೆಚ್ಚಿನ ಪ್ರದರ್ಶನ ಮಳಿಗೆಗಳು, 10,000ಕ್ಕೂ ಹೆಚ್ಚಿನ ತಂತ್ರಜ್ಞಾನ ಪರಿಣಿತರು ಮತ್ತು ಪ್ರತಿನಿಧಿಗಳು, 50,000ಕ್ಕೂ ಹೆಚ್ಚಿನ ಆಸಕ್ತರು, ವಿದ್ಯಾರ್ಥಿಗಳು ಹಾಗೂ ವೀಕ್ಷಕರು ಭೇಟಿ ನೀಡುವ ನಿರೀಕ್ಷೆ ಇದೆ. 60 ದೇಶಗಳ ಪ್ರತಿನಿಧಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಮಾಹಿತಿ ತಂತ್ರಜ್ಞಾನ, ಡೀಪ್ಟೆಕ್, ಎಐ , ಸೆಮಿಕಾನ್, ಡಿಜಿ–ಆರೋಗ್ಯ, ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣಾ ಹಾಗೂ ಬಾಹ್ಯಾಕಾಶ ಎಂಬ ಪರಿಕಲ್ಪನೆಗಳ ಅಡಿಯಲ್ಲಿ ಗೋಷ್ಠಿಗಳು ಮತ್ತು ಪ್ರದರ್ಶನಗಳನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವ ಸಂಪುಟದ ಸಹೋದ್ಯೋಗಿಗಳು, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಷಾ, ಇನ್ಫೋಸಿಸ್ ಸಂಸ್ಥೆಯ ಕ್ರಿಸ್ ಗೋಪಾಲಕೃಷ್ಣನ್, ಉದ್ಯಮಿ ಪದ್ಮಶ್ರೀ ಪ್ರಶಾಂತ ಪ್ರಕಾಶ, ವಿವಿಧ ದೇಶಗಳ ಉದ್ಯಮಿಗಳು, ಮೇಯರ್ ಗಳು, ಕಾನ್ಸಲ್ ಜೆನರಲ್ ಗಳು ಉಪಸ್ಥಿತರಿದ್ದರು.

