ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣದಲ್ಲಿ ವಾಸವಿರುವ ಬೀದಿ ನಾಯಿಗಳನ್ನು ಪರಿಶೀಲಿಸಿ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ನಗರ ಸಭೆ ಮುಖ್ಯಾಧಿಕಾರಿಗಳು ಅಥವಾ ಪೌರಾಯುಕ್ತರಿಗೆ ಮಾಹಿತಿ ನೀಡಬೇಕು.
ಈ ಸ್ಥಳಗಳಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆ ವತಿಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಜವಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು.
ಸ್ಥಳಾಂತರದ ನಂತರ ಪುನಃ ನಾಯಿಗಳು ವಾಸ ಮಾಡಲು ಅವಕಾಶ ನೀಡಬಾರದು. ಒಂದು ವೇಳೆ ಬೀದಿ ನಾಯಿಗಳು ವಾಸವಾಗಿರುವುದು ಕಂಡುಬಂದರೆ ಸಂಬಂದ ಪಟ್ಟ ಸಂಸ್ಥೆಯಿಂದ ಸ್ಥಳಾಂತರದ ವೆಚ್ಚವನ್ನು ವಸೂಲಿ ಮಾಡಿ, ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೊಳಲ್ಕೆರೆ ಪುರಸಭಾ ಹಾಗೂ ಚಳ್ಳಕೆರೆ ನಗರಸಭೆ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

