ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಪಕ್ಷಗಳ ಭರಾಟೆಯಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಬಂದು ಹಾಗೇ ಕಣ್ಮರೆಯಾಗಿವೆ.ಈನಡುವೆ ಜೆಡಿಎಸ್ ಪಕ್ಷ 25 ವರ್ಷ ಪೂರೈಸಿ ಅಸ್ಮಿತೆ ಉಳಿಸಿಕೊಂಡಿರುವುದೇ ದೊಡ್ಡ ಸಾಧನೆ ಇದಕ್ಕೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಪಡೆಯೇ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅರಸು ಕಾಂಗ್ರೆಸ್, ಬಂಗಾರಪ್ಪ ಅವರ ಪ್ರಾದೇಶಿಕ ಪಕ್ಷ ಸೇರಿದಂತೆ ಇತರೆ ರಾಜಕೀಯ ನಾಯಕರ ಪಕ್ಷಗಳು ಕಣ್ಮರೆಯಾಗಿವೆ. ಆದರೆ ಜೆಡಿಎಸ್ ಪಕ್ಷ ಉಗಮವಾಗಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಡಿಎಸ್ ಪಕ್ಷದ ಜೆಪಿ ಭವನದಲ್ಲಿ ನವೆಂಬರ್ 22ರ ಶನಿವಾರದಂದು ಬೆಳ್ಳಿ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಜಯಣ್ಣ ಕರೆ ನೀಡಿದರು.
ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಹೋರಾಟ ಮಾಡಿ ಇನ್ನೂ ಜೀವಂತವಾಗಿದೆ. ಇದರ ಮಧ್ಯ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ದೇವೇಗೌಡರು ಮತ್ತು ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಮಾಡಿರುವ ಕಾರ್ಯಗಳ ಜನಮನದಲ್ಲಿ ಉಳಿದಿವೆ. ಕಾರ್ಯಕರ್ತರು ಮುಖಂಡರುಗಳ ಪರಿಶ್ರಮ, ಪಕ್ಷ ನಿಷ್ಠೆ, ಬದ್ಧತೆಯಿಂದ ಕೂಡಿದ ಹೋರಾಟದಿಂದಾಗಿ ಪಕ್ಷವು ಬಲಿಷ್ಠವಾಗಿದೆ ಎಂದು ಜಯಣ್ಣ ತಿಳಿಸಿದರು.
ಪ್ರಸ್ತುತ ಎನ್ ಡಿಎ ಒಕ್ಕೂಟದಲ್ಲಿರುವ ಜೆಡಿಎಸ್ ಪಕ್ಷದ ನಾಯಕಾರದ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಷ್ಟಗಳನ್ನುನಿಭಾಯಿಸಿಕೊಂಡು ಪಕ್ಷವನ್ನು ಜೀವಂತ ಇಟ್ಟಿದ್ದಾರೆ. ಇದಕ್ಕೆ ಕಾರ್ಯಕರ್ತರ ಕೊಡುಗೆಯೂ ದೊಡ್ಡದು ಎಂದು ಜಿಲ್ಲಾಧ್ಯಕ್ಷರು ಹೇಳಿದರು.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಕೂ ಬಿಜೆಪಿ ಜೊತೆಗಿನ ನಮ್ಮ ಮೈತ್ರಿ ಮುಂದುವರೆಯುತ್ತದೆ. 2028ಕ್ಕೆ ಎನ್ ಡಿಎ ಮೈತ್ರಿ ಕೂಟ ಅಧಿಕಾರ ಹಿಡಿಯುವುದು ಶತಸಿದ್ಧ ಎಂದು ಜಯಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಗೆ ಮೊದಲು ಬರುವ ಜಿಪಂ, ತಾಪಂ ಮತ್ತು ನಗರಸಭೆ, ಪುರಸಭೆ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿಯೊಂದಿಗೆ ಮುನ್ನಡೆಯುತ್ತದೆ ಎಂದು ಜಿಲ್ಲಾಧ್ಯಕ್ಷ ಜಯಣ್ಣ ತಿಳಿಸಿದರು.
ಜೆಡಿಎಸ್ ಪಕ್ಷದ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ ಪ್ರಾದೇಶಿಕ ಪಕ್ಷ 25 ವರ್ಷಗಳನ್ನು ಪೂರೈಸುವುದು ಸುಲಭದ ಮಾತಲ್ಲ, ಅನೇಕ ದೊಡ್ಡ ನಾಯಕರು ಪಕ್ಷ ಕಟ್ಟಿದ್ದರೂಮುನ್ನಡೆಸಲು ಸಾಧ್ಯವಾಗಿಲ್ಲ. ಆದರೆ, ಜೆಡಿಎಸ್ ಪಕ್ಷವು ಈ ದೇಶಕ್ಕೆ ಪ್ರಧಾನಿ ಕೊಟ್ಟಿದೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಉಪಮುಖ್ಯಮಂತ್ರಿ ಆಗಿದ್ದಾರೆ. ದೊಡ್ಡ ದೊಡ್ಡ ಲೀಡರ್ ಗಳನ್ನು ಜೆಡಿಎಸ್ ಪಕ್ಷ ರಾಜಕೀಯಕ್ಕೆ ಕೊಡುಗೆ ನೀಡಿದೆ. ಕಟ್ಟ ಕಡೆಯ ವ್ಯಕ್ತಿಗಳನ್ನು ತಲುಪಿರುವುದು ಜೆಡಿಎಸ್ ಪಕ್ಷದ ಹೆಮ್ಮೆ ಎಂದು ಅವರು ತಿಳಿಸಿದರು.
ಒಮ್ಮೆಯಾದರೂ ಸ್ವತಂತ್ರವಾಗಿ ಕುಮಾರಸ್ವಾಮಿ ಅವರು ಸರ್ಕಾರ ರಚಿಸಿದ್ದರೆ ಕರ್ನಾಟಕ ರಾಮರಾಜ್ಯ ಆಗುತ್ತಿತ್ತು. ಇದು ಸಂಪೂರ್ಣ ರೈತರ, ದನಿ ಇಲ್ಲದವರ, ಬಡವರ ಪಕ್ಷವಾಗಿದೆ ಎಂದು ರವೀಂದ್ರಪ್ಪ ಹೇಳಿದರು.
25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಆಚರಣೆಯನ್ನು ಇಡೀ ವರ್ಷ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ತಯಾರಿ ನಡೆದಿದೆ ಎಂದು ಅವರು ತಿಳಿಸಿದರು.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಬಿಹಾರ ಫಲಿತಾಂಶವು ಕರ್ನಾಟಕದಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿ ಆಗಲಿದೆ. 2028ರಲ್ಲಿ ಕರ್ನಾಟಕದಲ್ಲೂ ಇದೇ ಫಲಿತಾಂಶ ಬರಲಿದೆ. ಜನವಿರೋಧಿ ಆಡಳಿತವನ್ನು ಜನ ಸಹಿಸುವುದಿಲ್ಲ ಎಂದು ಎಂ.ರವೀಂದ್ರಪ್ಪ ತಿಳಿಸಿದರು.
“ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದೆ. ಹಿರಿಯೂರು ಮತ್ತು ಚಳ್ಳಕೆರೆ ಕ್ಷೇತ್ರಗಳಿಂದ ಆಯ್ಕೆಯಾದವರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲದೆ ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ಕೆ ಬಸವರಾಜನ್ ಕೂಡಾ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಹಾಗಾಗಿ ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ಈ ಮೂರು ಕ್ಷೇತ್ರಗಳನ್ನ ಜೆಡಿಎಸ್ ಪಕ್ಷಕ್ಕೆ ಕೇಳುತ್ತೇವೆ”.
ಎಂ.ರವೀಂದ್ರಪ್ಪ, ಜೆಡಿಎಸ್ ಮುಖಂಡರು, ಹಿರಿಯೂರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ, ಯುವ ಘಟಕದ ಕಾರ್ಯಾಧ್ಯಕ್ಷ ಪ್ರತಾಪ್ ಜೋಗಿ, ವಕೀಲ ಹನುಮಂತರಾಯ, ಜಿಲ್ಲೆಯ ವಿವಿಧ ತಾಲೂಕು ಜೆಡಿಎಸ್ ಅಧ್ಯಕ್ಷರುಗಳಾದ ಹನುಮಂತರಾಯ, ಪರಮೇಶ್ವರಪ್ಪ, ವೀರಭದ್ರಪ್ಪ, ಗಣೇಶ್ ಮೂರ್ತಿ, ಮುಖಂಡರಾದ ಶಂಕರಮೂರ್ತಿ, ಚಿದಾನಂದ, ತಿಪ್ಪೇಸ್ವಾಮಿ, ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.

