ಏರೋ ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನ

News Desk

ಚಂದ್ರವಳ್ಳಿ ನ್ಯೂಸ್,ದುಬೈ:
ದುಬೈನಲ್ಲಿ ಏರ್ಪಡಿಸಲಾಗಿದ್ದ ಏರೋ ಶೋ ವೇಳೆ ಭಾರತದ ತೇಜಸ್ ಯುದ್ಧ ವಿಮಾನ ಪತನಗೊಂಡಿದೆ. ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶುಕ್ರವಾರ ಮಧ್ಯಾಹ್ನ ಹಾರಾಟ ನಡೆಸುತ್ತಿದ್ದ ವಿಮಾನ ನೋಡ ನೋಡುತ್ತಿದ್ದಂತೆಯೇ ಬೆಂಕಿಯುಂಡೆಯಾಗಿ ನೆಲಕ್ಕೆ ಅಪ್ಪಳಿಸಿತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಏಕ ಆಸನದ ಹಗುರ ಯುದ್ಧ ವಿಮಾನ ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಪತನವಾಗಿದ್ದು ಸ್ಫೋಟದ ಬಳಿಕ ದಟ್ಟವಾದ ಕಪ್ಪು ಹೊಗೆ ಆವರಿಸಿದೆ.

- Advertisement - 

ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದ್ವೈವಾರ್ಷಿಕ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆ. ಎಮಿರೇಟ್ಸ್ ಮತ್ತು ಪ್ಲೈ ದುಬೈನಿಂದ ಬಹು ಬಿಲಿಯನ್ ಡಾಲರ್ ಮೊತ್ತದ ವಿಮಾನ ಖರೀದಿ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಏರ್ ಶೋ ವೇಳೆಯಲ್ಲಿ ಘೋಷಿಸಲಾಗಿದೆ. ಇದು ಎರಡನೇ ತೇಜಸ್ ವಿಮಾನದ ಅಪಘಾತವಾಗಿದೆ. ಮಾರ್ಚ್-2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನವಾಗಿತ್ತು. ಆದರೆ ಪೈಲಟ್ ಸುರಕ್ಷಿತವಾಗಿ ಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ತೇಜಸ್ 4.5 ಪೀಳಿಗೆಯ ಬಹುಪಯೋಗಿ ಯುದ್ಧ ವಿಮಾನವಾಗಿದ್ದು, ವಾಯು-ರಕ್ಷಣಾ ಕಾರ್ಯಾಚರಣೆ, ಆಕ್ರಮಣಕಾರಿ ವಾಯು ಬೆಂಬಲ ಮತ್ತು ಯುದ್ಧ ಕಾರ್ಯಾಚರಣೆ ನಿರ್ವಹಿಸಲು ನಿರ್ಮಿಸಲಾಗಿದೆ.

- Advertisement - 

ಪೈಲಟ್ ಸಾವು ದೃಢ-
ತೇಜಸ್ ಯುದ್ಧ ವಿಮಾನ ಸ್ಫೋಟದಲ್ಲಿ ಪೈಲಟ್ ಸಾವನ್ನಪ್ಪಿರುವುದನ್ನು ಭಾರತೀಯ ವಾಯುಪಡೆ ದೃಢಪಡಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಈ ದು:ಖದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದೆ.

ಇದೇ ವೇಳೆ ತೇಜಸ್ ಯುದ್ಧ ವಿಮಾನ ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ವಿಚಾರಣಾ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಭಾರತೀಯ ವಾಯುಪಡೆ ಹೇಳಿದೆ.

Share This Article
error: Content is protected !!
";