ಸಿಎಂ-ಡಿಸಿಎಂ ಬಣಗಳಲ್ಲಿ ತಲ್ಲಣ, ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ?
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಅಧಿಕಾರ ಹಂಚಿಕೆ ಸೂತ್ರದಂತೆ ಅಧಿಕಾರ ಪಡೆಯಲು ಮತ್ತು ಅಧಿಕಾರದಲ್ಲಿ ಮುಂದುವರೆಯಲು ಸಿಎಂ ಬಣ ಮತ್ತು ಡಿಸಿಎಂ ಬಣವು ತಂತ್ರ-ಪ್ರತಿ ತಂತ್ರದಲ್ಲಿ ತೊಗಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷಿಪ್ರ ಕ್ರಾಂತಿಯಾಗುವ ಸಾಧ್ಯತೆ ಗೋಚರಿಸತೊಡಗಿದೆ.
ಡಿಕೆಶಿಗೆ 70 ಶಾಸಕರ ಬೆಂಬಲ?
ಡಿಕೆ ಶಿವಕುಮಾರ್ ಪರವಾಗಿ ಗುರುವಾರ ಮತ್ತು ಶುಕ್ರವಾರ ಸುಮಾರು 70ಕ್ಕೂ ಹೆಚ್ಚಿನ ಶಾಸಕರು ದೂರವಾಣಿ ಕರೆ ಮಾಡಿ ತಾವು ಪಟ್ಟು ಬಿಡದಂತೆ ಹೈ ಕಮಾಂಡ್ ಗೆ ಒತ್ತಡ ತನ್ನಿ, ಅಷ್ಟು ಜನ ಶಾಸಕರು ನಿಮ್ಮ ಜೊತೆ ಇರುತ್ತೇವೆ. ಪಕ್ಷ ಕಟ್ಟಿದ ನಿಮ್ಮಂಥವರಿಗೆ ಅಧಿಕಾರ ಸಿಗಲಿಲ್ಲ ಎಂದರೆ ಏನರ್ಥ ಎನ್ನುವ ದಾಟಿಯಲ್ಲಿ ದೂರವಾಣಿ ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿರುವುದು ಮತ್ತು ಶಾಸಕ ಜಿ.ಎಸ್. ಪಾಟೀಲ್ ಮತ್ತು ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ ಕೂಡ ಡಿ.ಕೆ. ಶಿವಕುಮಾರ್ ಅವರನ್ನು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಶುಕ್ರವಾರ ಮತ್ತಷ್ಟು ಶಾಸಕರು ದೆಹಲಿ ಯಾತ್ರಗೆ ಹೊರಟಿರುವುದು ನೋಡಿದರೆ ಸರ್ಕಾರ ಬದಲಾಗುವ ಸಾಧ್ಯತೆ ಇದೆ. ರಾಜ್ಯದ ಜನತೆಯೂ ಬದಲಾವಣೆ ಬಯಸುತ್ತಿರುವುದರಿಂದ ಶೀಘ್ರ ಸರ್ಕಾರ ಬದಲಾವಣೆ ಆಗಲಿದೆ ಎಂದು ಡಿಕೆಶಿ ಆಪ್ತರು ಅಭಿಪ್ರಾಯವಾಗಿದೆ.
ದಾಳ ಉರುಳಿಸುತ್ತಿರುವ ಬಣಗಳು-
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳು ಅಧಿಕಾರಕ್ಕಾಗಿ ದಾಳ ಉರುಳಿಸುತ್ತಿವೆ. ಡಿ.ಕೆ ಶಿವಕುಮಾರ್ ಬಣ ಏಕಾಏಕಿ ದೆಹಲಿಗೆ ತೆರಳಿ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದೆ. ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದೆ. ಶುಕ್ರವಾರ ಕೂಡ ಒಂದಿಷ್ಟು ಶಾಸಕರು ಡಿಕೆಶಿ ಪರವಾಗಿ ದೆಹಲಿ ಯಾತ್ರೆ ಮಾಡಿದ್ದಾರೆ.
ಇದರ ಮಧ್ಯ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಆಗಿ ಡಿಕೆ ಶಿವಕುಮಾರ್ ಅವರು ದಿಢೀರ್ ಭೇಟಿ ಮಾಡಿ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರನ್ನ ಭೇಟಿ ಮಾಡಿ ಬೆಂಬಲ ಕೋರಿರುವ ಸಾಧ್ಯತೆ ಇದೆ. ಮುಂದೆ ಶಾಸಕಾಂಗ ಪಕ್ಷದ ಸಭೆ ಕರೆದಾಗ ಶಾಸಕರ ಸಂಖ್ಯೆ ದೊಡ್ಡದಿರಲಿ ಎನ್ನುವ ಕಾರಣಕ್ಕಾಗಿ ಭೇಟಿ ಮಾಡಿದರು ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಪ್ರತಿತಂತ್ರ ರೂಪಿಸಿ ದಿಢೀರ್ ರಾತ್ರಿ ಊಟದ ನೆಪದಲ್ಲಿ ಸೇರಿಕೊಂಡು ಮಹತ್ವದ ಚರ್ಚೆ ನಡೆಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳು ಶುಕ್ರವಾರದ ಅಧಿಕೃತ ಕಾರ್ಯಕ್ರಮಗಳನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಕೃಷಿ ಸಚಿವರ ಗೈರಿನಲ್ಲಿ ಕೃಷಿ ಇಲಾಖೆಯ ಮಹತ್ವದ ಸಭೆ ನಡೆಸುವ ಮೂಲಕ ಡಿಕೆ ಶಿವಕುಮಾರ್ ಬಣಕ್ಕೆ ಹಿನ್ನೆಡೆಯಾಗುವಂತ ಸಂದೇಶ ರವಾನೆ ಮಾಡಿದ್ದಾರೆ.
ಐದು ವರ್ಷ ನಾನೇ ಸಿಎಂ, ಬಜೆಟ್ ನಾನೇ ಮಂಡಿಸುತ್ತೇನೆ ಎಂದಿದ್ದಾರೆ. ಮೈಸೂರು ಕಾರ್ಯಕ್ರಮ ಒಂದರಲ್ಲಿ ಸಾರ್ವಜನಿಕರು ನೀವೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವ ಕೂಗು ಎದ್ದಾಗ ಜನರ ಆಶೀರ್ವಾದ ಇದ್ದರೆ ಮಾತ್ರ ಮುಂದುವರೆಯಲು ಸಾಧ್ಯ ಎನ್ನುವ ಸಂದೇಶ ರವಾನೆ ಮಾಡಿ ಅವಕಾಶ ಸಿಕ್ಕಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಹೈಕಮಾಂಡ್ ತೀರ್ಮಾನಕ್ಕೆ ನಾನು ಕೇಳಬೇಕು, ಡಿಕೆಶಿನೂ ಕೇಳಬೇಕು ಎಂದು ಹೇಳಿದರು.
ಹೈಕಮಾಂಡ್‌ಗೆ ಒತ್ತಡ-
ಡಿಕೆ ಶಿವಕುಮಾರ್ ಆಪ್ತ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಹೈಕಮಾಂಡ್ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಡಿಸಿಎಂ ಡಿಕೆಶಿ ಆಪ್ತ ಶಾಸಕರಾದ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್ ವಿಶ್ವನಾಥ್, ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಶೃಂಗೇರಿ ಶಾಸಕ ರಾಜೇಗೌಡ, ಹೊಸಕೋಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕ ರಾಜೇಗೌಡ ಈ ಕುರಿತು ಮಾತನಾಡಿ, ಹೈಕಮಾಂಡ್ ಗಟ್ಟಿಯಾಗಿದೆ ಎಂದು ಚುಟುಕು ಉತ್ತರ ನೀಡಿದ್ದಾರೆ.
ಡಿಕೆಶಿ ದೆಹಲಿ ದಂಡಯಾತ್ರೆ?
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನವೆಂಬರ್-20ಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಡಿಕೆ ಶಿವಕುಮಾರ್ ಬೆಂಬಲಿಗರು ದೆಹಲಿ ದಂಡೆಯಾತ್ರೆ ಆರಂಭಿಸಿ ಹೈಕಮಾಂಡ್ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ. ಡಿಕೆ
ಶಿವಕುಮಾರ್ ತಂತ್ರಗಾರಿಕೆ ಏನು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನವೆಂಬರ್ 21ರಂದು ಬದಲಾವಣೆ ಚರ್ಚೆಯಾಗಬಹುದೆಂದು ಭಾವಿಸಿದ್ದರು ಎನ್ನಲಾಗಿದೆ. ಆದರೆ, ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವುದರಿಂದ ಹೈಕಮಾಂಡ್ ಕುಗ್ಗಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವ ಕರ್ನಾಟಕ ರಾಜಕೀಯ ಕುರಿತು ಹೈಕಮಾಂಡ್ ತಲೆಕೆಡಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ. ಯಾವುದೇ ಚರ್ಚೆಗೂ ವೇದಿಕೆ ಹೈಕಮಾಂಡ್ ಕಲ್ಪಿಸಿಲ್ಲ.
ಹೈಕಮಾಂಡ್ ಭೇಟಿಗಾಗಿ ಎರಡು ದಿನ ಕಾದರೂ ರಾಹುಲ್ ಭೇಟಿ ಸಾಧ್ಯವಾಗದಿದ್ದಾಗ ಡಿಕೆ ಶಿವಕುಮಾರ್ ವಾಪಸ್ ಆಗಿದ್ದರು.
ಈ ಬೆಳವಣಿಗೆ ಮಧ್ಯೆ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಡಿಕೆ ಸುರೇಶ್ ಆಗಮಿಸಿದ್ದಾರೆ. ಅತ್ತ ಡಿಕೆ ಬಣ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರೆ, ಇತ್ತ ಸದಾಶಿವನಗರದ ಮನೆಯ ಬಾಲ್ಕನಿಯಲ್ಲಿ ಡಿಕೆ ಶಿವಕುಮಾರ್ ಅತ್ತಿಂದಿತ್ತ ಓಡಾಡುತ್ತಿದ್ದಾರೆ.
ಹೈಕಮಾಂಡ್ ಮಧ್ಯಪ್ರವೇಶಿಸಬೇಕು-ಬಾಲಕೃಷ್ಣ
ಶಾಸಕರ ದೆಹಲಿ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ ಆಪ್ತ ಶಾಸಕ ಹೆಚ್ಸಿ ಬಾಲಕೃಷ್ಣ, ಶಾಸಕರು ಯಾಕೆ ದೆಹಲಿಗೆ ಹೋಗಿದ್ದಾರೋ ಗೊತ್ತಿಲ್ಲ. ಆದರೆ, ಹೈಕಮಾಂಡ್ ಮಧ್ಯಪ್ರವೇಶಿಸಬೇಕು. ಶಾಸಕಾಂಗ ಸಭೆಯನ್ನಾದರೂ ಕರೆಯಬೇಕು ಎಂದಿದ್ದಾರೆ.
ಚಲುವರಾಯಸ್ವಾಮಿಗೆ ಸಿದ್ದರಾಮಯ್ಯ ಕರೆ–
ಇದರ ಮಧ್ಯೆ ಸಚಿವ ಚಲುವರಾಯಸ್ವಾಮಿ ಕೂಡಾ ದೆಹಲಿಗೆ ತೆರಳಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಲುವರಾಯಸ್ವಾಮಿಗೆ ಸಿಎಂ ಕರೆ ಮಾಡಿ ದೆಹಲಿಗೆ ಹೋಗಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಹೌದು ಇಲಾಖೆ ಕೆಲಸಕ್ಕಾಗಿ ಕೇಂದ್ರ ಸಚಿವರ ಭೇಟಿಗೆ ಬಂದಿದ್ದೆ ಎಂದಿದ್ದಾರೆ. ಕೆಲ ಶಾಸಕರು ದೆಹಲಿಗೆ ದಿಢೀರ್ ಆಗಿ ಹೋಗಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಬಣ ಕೂಡಾ ಸಕ್ರಿಯವಾಗಿದ್ದು ಸಭೆ ಸೇರಿ ಚರ್ಚಿಸುತ್ತಿದೆ.

