ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ. ಹಣ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಿಎಂಎಸ್ ಸೆಕ್ಯುರಿಟೀಸ್ ಕಸ್ಟೋಡಿಯನ್ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 5.76 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ವರದಿಯಾದ 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಆರರಿಂದ 8 ಜನರು ಶಾಮೀಲಾಗಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿ,
ಕಳೆದ ಮೂರು ತಿಂಗಳಿಂದ ದರೋಡೆಗೆ ಸಂಚು ರೂಪಿಸಿದ್ದರು. ಆರೋಪಿಗಳು ಕೃತ್ಯಕ್ಕೆ ಕಳೆದ 15 ದಿನಗಳಿಂದಲೂ ಸ್ಥಳ ಪರಿಶೀಲಿಸಿ ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್ – ಜಯನಗರ – ಡೇರಿ ಸರ್ಕಲ್ ಮಾರ್ಗದಲ್ಲಿ ಬಂದು, ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿ ತಾವು ಆರ್‌ಬಿಐ ನಿಯಂತ್ರಣಾಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು.
ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್‌ನತ್ತ ಚಲಾಯಿಸುವಂತೆ ಸೂಚಿಸಿದ್ದ ಎಂದು ಆಯುಕ್ತರು ವಿವರಿಸಿದರು.
ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಮೊಬೈಲ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಬಳಿ ಕೆಳಗಿಳಿಸಿ ಕಾಲ್ಕಿತ್ತಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಕಳೆದುಹೋಗಿತ್ತು.
ನಂತರ ನಾವು ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿಗಳು ಇರದ ಸ್ಥಳಗಳನ್ನು ಬಳಸಿಕೊಂಡಿರುವುದು, ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಸಹ ಸರಣಿ ನಂಬರ್‌ನಲ್ಲಿ ಇರದಿರುವುದು ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಆದರೂ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿ ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ಎಸ್‌ಪಿಗಳು, ನೆರೆಯ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಂಗಳೂರು ಪೊಲೀಸ್ ಇಲಾಖೆಯ ಇಬ್ಬರು ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದ ಸುಮಾರು 200 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ 11 ತಂಡಗಳು ಕೇರಳ, ತಮಿಳುನಾಡು, ತೆಲಂಗಾಣಗಳಿಗೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದರು ಎಂದು ಅವರು ತಿಳಿಸಿದರು.
ಬಹುಮಾನ ಘೋಷಣೆ:
ಬೆಂಗಳೂರು ಹೊರವಲಯದಲ್ಲಿ ಹಾಗೂ ವಿವಿಧೆಡೆ ಬಚ್ಚಿಟ್ಟಿದ್ದ 5.76 ಕೋಟಿ ರೂಪಾಯಿ ಹಣವನ್ನು ಸದ್ಯಕ್ಕೆ ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ತನಿಖಾ ತಂಡಕ್ಕೆ 5 ಲಕ್ಷ ರೂ. ನಗದು ಬಹುಮಾನ ಘೋಷಿಸಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

