ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಉತ್ತಮ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ವಿದ್ಯಾವಂತ ಸಮುದಾಯದ ಪ್ರಮುಖ ಆದ್ಯತೆಯಾಗಬೇಕು ಎಂದು ಲಾವಣ್ಯ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್ ಹೇಳಿದರು.
ಇಲ್ಲಿನ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದಿಂದ ಶನಿವಾರ ನಡೆದ ಎಂಬಿಎ ಮತ್ತು ಎಂಕಾಂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪದವಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಸಾಮಾಜಿಕ ಅವಕಾಶಗಳನ್ನೂ ಸೃಷ್ಠಿಸುತ್ತವೆ. ಬದ್ದತೆಯಿಂದ ಕೆಲಸ ಮಾಡುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕು. ಸಮರ್ಪಣಾ ಮನೋಭಾವ ಯಶಸ್ಸಿನ ಮೊದಲ ಹಂತವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ವ್ಯವಹಾರ ಅಧ್ಯಯನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕೇವಲ ಉದ್ಯೋಗಾಕಾಂಕ್ಷಿಗಳು ಮಾತ್ರವಾಗದೆ, ಉದ್ಯೋಗದಾತರಾಗಿ ಬೆಳೆಯುವ ಗುರಿ ಹೊಂದಿರಬೇಕು.
ಗ್ರಾಮೀಣ ಭಾಗಗಳಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದಾಗ ಉನ್ನತ ಮಟ್ಟದ ಸಾಧನೆಗಳು ಸಾಧ್ಯವಾಗುತ್ತವೆ. ಜಾಲಪ್ಪನವರ ಆಶಯಗಳಿಗೆ ಪೂರಕವಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದರು.
ಇದೇ ವೇಳೆ ಪ್ರಸಕ್ತ ವರ್ಷ ಎಂ.ಬಿ.ಎ ಮತ್ತು ಎಂ.ಕಾಂ ಪದವಿಗಳನ್ನು ಪೂರೈಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೌರಪ್ಪ, ಡೀನ್ ಡಾ.ಎಂ.ಶ್ರೀನಿವಾಸರೆಡ್ಡಿ, ಮಾನವ ಸಂಪನ್ಮೂಲ ನಿರ್ದೇಶಕ ಪ್ರೊ.ಬಾಬುರೆಡ್ಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ವಿಭಾಗ ಮುಖ್ಯಸ್ಥರಾದ ಎಸ್.ನಂದನ, ಪಿ.ಮಧುಶ್ರೀ, ಪಿ.ಚೈತ್ರ, ಸಿ.ಪಿ.ಪ್ರಕಾಶ್, ಪದ್ಮ, ಉದ್ಯೋಗಾಧಿಕಾರಿ ಬಾಬುಸಾಬಿ, ಭಾನುಶ್ರೀ ಮತ್ತಿತರರು ಉಪಸ್ಥಿತರಿದ್ದರು.

