ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತು ಒಂದು ದಿನದ ತರಬೇತಿ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಸಿಎಂಆರ್ ಮತ್ತು ಕೆಎಚ್‍ಪಿಟಿ, ಸೆಂಟ್ ಜಾನ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಂಗಸ್ವಾಮಿ ನಾಯ್ಕ್ ಗಿಡಕ್ಕೆ ನೀರೆರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ರಂಗಸ್ವಾಮಿ ನಾಯ್ಕ್, ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ತೊಡಕಿನ ಗರ್ಭಿಣಿಯ ಪತ್ತೆ ಹಚ್ಚುವಿಕೆ, ಗರ್ಭಿಣಿಯರ ನೋಂದಣಿ, ತಾಯಿ ಮತ್ತು ಶಿಶು ಮರಣದ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನ ಕಾಪಾಡಬಹುದೆಂದು ತಿಳಿಸಿದರು. ಐಸಿಎಂಆರ್ ತಂಡದ ಸಮುದಾಯದ ಸಂಯೋಜಕ ಎನ್.ಉಮೇಶ್ ಮಾತನಾಡಿದರು.
ತರಬೇತಿಯಲ್ಲಿ ಐಸಿಎಂಆರ್ ತಂಡದ ಶ್ರುತಿ, ಅಬ್ಬಾಸ್, ವೆಂಕಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು, ಭಾಗವಹಿಸಿದ್ದರು.

