ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಲ್ ಸೆಂಟರ್ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಕಾನ್ಸ್ಟೇಬಲ್ ಸಹಿತ 8 ಜನ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಣಕ್ಕಾಗಿ ಉದ್ಯೋಗಿಗಳನ್ನು ಅಪಹರಿಸಿದ್ದ ಆರೋಪಿಗಳಾದ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಚಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಎಂಬುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ.
ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಾಲ್ ಸೆಂಟರ್ ಬಳಿ ತೆರಳಿದ್ದ ಆರೋಪಿಗಳು ತಾವು ಪೊಲೀಸರು ಎಂದು ಉದ್ಯೋಗಿಗಳನ್ನು ಬೆದರಿಸಿದ್ದರು. ಬಳಿಕ ಪವನ್, ರಾಜ್ವೀರ್, ಆಕಾಶ್, ಅನಸ್ ಎಂಬ ನಾಲ್ವರನ್ನು ಅಪಹರಿಸಿ ಕರೆದೊಯ್ದಿದ್ದು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕಂಪನಿಯ ಆಪರೇಷನಲ್ ಮ್ಯಾನೇಜರ್ ಖಾತೆಯಿಂದ 18 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಳಿಕ ಶನಿವಾರ ಮುಂಜಾನೆ 4 ಗಂಟೆಗೆ ಕಾಲ್ ಸೆಂಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಹೊಸಕೋಟೆಯ ಲಾಡ್ಜ್ನಲ್ಲಿ ಆರೋಪಿಗಳಿರುವುದನ್ನು ಪತ್ತೆ ಹಚ್ಚಿ ಅಪಹರಣಕಾರರನ್ನು ಪೊಲೀಸರು ರಕ್ಷಿಸಿದ್ದಾರೆ.
ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ 2 ಕಾರು ಜಪ್ತಿ ಮಾಡಲಾಗಿದೆ.
ಕಾಲ್ ಸೆಂಟರ್ ಮೇಲೆ ಇತ್ತೀಚೆಗೆ ಪೊಲೀಸರು ದಾಳಿ ನಡೆಸಿದ್ದ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಆರೋಪಿತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರುತಿಳಿಸಿದ್ದಾರೆ.
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಪ್ರಕರಣದ ಸಂಬಂಧ ಮಾತನಾಡಿ, ಕೋರಮಂಗಲ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಎಂಬ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತದೆ. ಶನಿವಾರ ಬೆಳಗ್ಗೆ 1 ಗಂಟೆ ಸಮಯಕ್ಕೆ ಆ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ 4 ಜನ ಮ್ಯಾನೇಜರ್ ಲೆವಲ್ನ ಉದ್ಯೋಗಿಗಳನ್ನು 8 ಜನ ಬಂದು ನಾವು ಪೊಲೀಸ್ನವರು, ಬನ್ನಿ ಮಾಹಿತಿ ಕೊಡಿ ಎಂಬ ನೆಪದಲ್ಲಿ ಅವರನ್ನು ಕೆಳಗೆ ಕರೆದುಕೊಂಡು ಬಂದು ಅಪಹರಿಸಿ ಕರೆದುಕೊಂಡು ಹೋಗಿದ್ದರು.
ಬಳಿಕ ಆ ಉದ್ಯೋಗಿಗಳಿಂದ ಆರೋಪಿಗಳು ಹಣಕ್ಕೆ ಬೇಡಿಕೆ ಇಡುತ್ತಾರೆ. ಆಪರೇಷನ್ ಮ್ಯಾನೇಜರ್ ಎಂಬ ಖಾತೆಯಿಂದ ಆರೋಪಿಗಳು ಬೇರೆ ಬೇರೆ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಬೆಳಗ್ಗೆ 4.30 ಸಮಯಕ್ಕೆ ಪೊಲೀಸ್ ಠಾಣೆಗೆ ಕರೆ ಬಂದಿರುತ್ತದೆ. ತಕ್ಷಣ 4 ತಂಡ ರಚಿಸಿ ಟ್ರ್ಯಾಕ್ ಮಾಡಿ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಉದ್ಯೋಗಿಗಳ ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದರು.

