ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ, ಸಾಹಿತ್ಯ, ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು, ಸಂಶೋಧನಾ ಮನೋಭಾವನೆ ಬೆಳೆಸಲು ಮತ್ತು ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸಲು ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯಲ್ಲಿರುವ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿಂದು ವಿಜ್ಞಾನ ಉತ್ಸವ-2025 ನ್ನು ಆಯೋಜನೆ ಮಾಡಲಾಗಿತ್ತು.
ಈ ಉತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಜ್ಞಾನವನ್ನು ಪ್ರದರ್ಶಿಸಿ, ಸಂವಾದಾತ್ಮಕ ಪ್ರದರ್ಶನಗಳು ಮತ್ತು ತಂತ್ರಜ್ಞಾನ ಆಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಶಾಲಾ ಮಕ್ಕಳು ತಾವೇ ತಯಾರಿಸಿ ಪ್ರದರ್ಶಿಸಿದ ವೈವಿಧ್ಯಮಯ ವಿಜ್ಞಾನ ಮಾದರಿ ಮತ್ತು ತಂತ್ರಜ್ಞಾನ ಆಧಾರಿತ ಪ್ರಾಜೆಕ್ಟ್‌ಗಳು, ಯಂತ್ರಗಳು, ಇತರೆ ಪ್ರಾತ್ಯಕ್ಷಿತೆಗಳು ಪೋಷಕರು, ಶಿಕ್ಷಕರು ಮತ್ತು ಇತರರನ್ನು ಆಕರ್ಷಿಸಿದವು.
ಬಾಹ್ಯಾಕಾಶಕ್ಕೆ ಸಂಬಂಧಿಸಿದ ಉಪಕರಣಗಳ ಮಾದರಿಯನ್ನು ತಯಾರಿಸಿರುವ ಶಾಲಾ ಮಕ್ಕಳು, ಅತ್ಯಾಧುನಿಕ ರಾಕೆಟ್ ಮಾದರಿ, ಬಾಹ್ಯಾಕಾಶ ನೌಕೆಯ ಮಾದರಿ, ಅತ್ಯಾಧುನಿಕ ಡ್ರೋನ್ ಮಾದರಿ, ಬಾಹ್ಯಾಕಾಶ ದೂರದರ್ಶಕ ಯಂತ್ರದ ಮಾದರಿ, ಸ್ಕೇರಿ(ದೆವ್ವದ ಮನೆ) ಹೌಸ್ ಸೇರಿದಂತೆ ಹಲವು ಬಗೆಯ ಉಪಕರಣಗಳ ಪ್ರದರ್ಶನ ಗಮನ ಸೆಳೆಯಿತು.
ವಿಜ್ಞಾನ ಪ್ರಯೋಗದ ಬಗ್ಗೆ ಸಣ್ಣ ಸಣ್ಣ ಮಕ್ಕಳು ವಿವರವಾಗಿ ಹೇಳುವುದನ್ನು ನೋಡಿದರೆ ಅಚ್ಚರಿಯಾಗುವಂತಿತ್ತು. ಇದರಲ್ಲಿ ಮನುಷ್ಯನ ದೇಹ ರಚನೆ, ಪರಿಸರ, ಸೋಲಾರ್, ನೀರು, ಮಣ್ಣು, ಪ್ರಾಣಿ, ಪಕ್ಷಿಗಳ ಬಗ್ಗೆಯೂ ಮಕ್ಕಳು ವಿವರವಾಗಿ ಪ್ರಾತ್ಯಕ್ಷಿಕೆ ನೀಡಿದರು.
ತಾರಾಲಯದಲ್ಲಿ ಭೂಮಿ, ಸೂರ್ಯ, ಚಂದ್ರನ ಬಗ್ಗೆ ಮಾಹಿತಿ, ಸೂರ್ಯನ ನಿಗೂಢ ರಹಸ್ಯ, ನಕ್ಷತ್ರಗಳ ಜೀವನ ಶೈಲಿ, ಸೌರಮಂಡಲ ಬಗ್ಗೆ ಮಾಹಿತಿ ನೀಡಲಾಯಿತು.
ವಿಜ್ಞಾನ ದಿನದ ಅಂಗವಾಗಿ ಸಡಗರದ ಈ ಪ್ರದರ್ಶನ ನಿಜಕ್ಕೂ ಶಾಲೆಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು ಅಂದರೆ ತಪ್ಪಾಗಲಾರದು.
ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ಕಾರ್ಯಾರ್ಶಿ ಶ್ರೀನಿವಾಸ್ ಮೂರ್ತಿ ಕೆ.ಜಿ ಮಾತನಾಡಿ, ಇಂದು ನಮ್ಮ ಶಾಲೆಯಲ್ಲಿ ವಿಶ್ವ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ, ಸಾಹಿತ್ಯ, ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು, ಸಂಶೋಧನಾ ಮನೋಭಾವನೆ ಬೆಳೆಸಲು ಮತ್ತು ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸಲು ವಿಜ್ಞಾನ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಇದರಲ್ಲಿ ಮಕ್ಕಳು ಅತಿ ಉತ್ಸುಕದಿಂದ ಭಾಗವಹಿಸಿ, ವಿಜ್ಞಾನ, ಗಣಿತ, ಸಾಹಿತ್ಯ, ಕಲೆ ಮತ್ತು ತಂತ್ರಜ್ಞಾನದ ಕುರಿತಾದ ಪ್ರಾತ್ಯಕ್ಷಿತೆಗಳನ್ನು ಏರ್ಪಡಿಸಿರುವುದು ಸಂತಸತಂದಿದೆ. ಇದರಿಂದ ನಾವು ಸಾಕಷ್ಟು ಕಲಿತಿದ್ದೇವೆ ಎಂದರು.
ಈ ವೇಳೆ ವಿದ್ಯಾರ್ಥಿ ಪೋಷಕರಾದ ಸುಜಾತ ಮಾತನಾಡಿ, ನನ್ನ ಮಗ ಲಿಟಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ LKG ಯಿಂದ 10ನೇ ತರಗತಿವರೆಗೆ ಓದಿ ಈಗ ನಾಗಾರ್ಜುನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದಾನೆ. ನನ್ನ ಮಗಳು ಇಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಲಿಟ್ಲ್ ಮಾಸ್ಟರ್ ಶಾಲೆಯಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಶಾಲಾ ಆಡಳಿತ ಮಂಡಳಿ ಉತ್ತಮ ಶಿಕ್ಷಣ ನೀಡುತ್ತಿದೆ. ಇಂದು ಮಕ್ಕಳು ವೈಜ್ಞಾನಿಕ, ಆಧುನಿಕವಾಗಿ ಪ್ರಾಜೆಕ್ಟ್ ಗಳನ್ನು ಮಾಡಿದ್ದಾರೆ. ಹೈನುಗಾರಿಕೆ, ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹೂದೋಟ, ಮಳೆ ಕುಯ್ಲು, ಭೂತಬಂಗಲೆ, ವಿಜ್ಞಾನ, ಇತಿಹಾಸ ಎಲ್ಲಾ ವಿಷಯಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ. ಮತ್ತೊಂದು ವಿಷಯ ಎಂದರೆ ಮಕ್ಕಳೇ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅಯ್ಯೋದ್ಯೆ, ರಾಮಮಂದಿರ ಸೇರಿ ಪ್ರತಿಯೊಂದು ವಿಷಯಗಳ ಬಗ್ಗೆ LKG ಮಕ್ಕಳಿಂದ ಹಿಡಿದು 10ನೇ ತರಗತಿ ಮಕ್ಕಳು ಭಾಗವಹಿಸಿದ್ದಾರೆ. ಲಿಟ್ಲ್ ಮಾಸ್ಟರ್ ಶಾಲಾ ಆಡಳಿತ ಮಂಡಳಿ ಮಕ್ಕಳ ತಂದೆ-ತಾಯಿಗಳಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಶಾಲೆಯಲ್ಲಿ ಎಜುಕೇಷನ್ ಚನ್ನಾಗಿದೆ. ನಾವು ನಮ್ಮ ಮಕ್ಕಳನ್ನು ಆಧುನಿಕವಾಗಿ ಬೆಳೆಸಲು ಇಚ್ಛೆಪಡುತ್ತೇವೆ. ನಾವು ರೈತರಾಗಿ ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡುವುದು ಇಷ್ಟ ಇಲ್ಲ. ಆದರೆ ಈ ಶಾಲೆಯಲ್ಲಿ ಕೃಷಿ ಸಂಬಂಧ ಪ್ರಾಜೆಕ್ಟ್ ನೀಡಿ ಅದರಲ್ಲಿ ತೊಡಗಿಸುವಂತೆ ಮಾಡಿ ಹಳ್ಳಿ ಸೊಬಗಿನ ವಾತಾವರಣ ಸೃಷ್ಟಿ ಮಾಡಿದ್ದಾರೆ. ಹಾಗಾಗಿ ಶಾಲಾ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನಂತರ ನಾಗಾರ್ಜುನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಮಹಂತೇಶ್ ಮಾತನಾಡಿ, ಮಕ್ಕಳ ಜ್ಞಾನವನ್ನು ವಿಜ್ಞಾನಕ್ಕೆ ಬಳಸಿ ಅತ್ಯುತ್ತಮವಾದ ವಿಜ್ಞಾನ ಪ್ರದರ್ಶನ ಏರ್ಪಡಿಸಿರುವುದನ್ನು ಕಂಡು ತುಂಬಾ ಸಂತೋಷವಾಗಿದೆ. ವಿಜ್ಞಾನ ಉತ್ಸವದಲ್ಲಿ ವಿಜ಼್ಞಾನಕ್ಕೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆ ಜೊತೆಗೆ ಕಲೆ, ಸಾಹಿತ್ಯ, ನಾಡು, ನುಡಿ, ಸಂಪ್ರದಾಯ, ಪಶುಸಂಗೋಪನೆ, ರೈತನ ಜೀವನ, ನಾಡಿನ ಭವ್ಯ ಪರಂಪರೆ ಸಾರುವ ಕಟ್ಟಡಗಳು ಸೇರಿದಂತೆ ಎಲ್ಲದರ ಪ್ರಯೋಗ, ಮಾದರಿ, ಪ್ರಾತ್ಯಕ್ಷಿಕೆಗಳನ್ನು ಮಕ್ಕಳು ಮಾಡಿದ್ದರು. ಈ ಶಾಲೆಯ ಮಕ್ಕಳು ತುಂಬಾ ಪ್ರತಿಭಾವಂತರಿದ್ದಾರೆ. ವಿಜ್ಞಾನ ಉತ್ಸವದಲ್ಲಿ ಎಲ್ಲಾ ಮಕ್ಕಳು ತೊಡಗಿಸಿಕೊಂಡು ತಮ್ಮ ಜ್ಞಾನ ಹೆಚ್ಚಸಿಕೊಂಡಿದ್ದಾರೆ ಎಂದು ಭಾವಿಸಿದ್ಧೇನೆ ಎಂದರು.
ನಂತರ ರಾಜ್ಯ ಮಟ್ಟದ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾತನಾಡಿ, ಲಿಟ್ಲ್ ಮಾಸ್ಟರ್ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಜ್ಞಾನ ವೃದ್ಧಿಗಾಗಿ ಹೊಸ ಹೊಸ ಪ್ರಯತ್ನಗಳನ್ನು ಶಾಲಾ ಆಡಳಿತ ಮಂಡಳಿ ಮಾಡುತ್ತಿದೆ. ಅದೇ ರೀತಿ ಇಂದು ವಿಜ್ಞಾನ ಉತ್ಸವವನ್ನು ಏರ್ಪಡಿಸಿ ಸಂಶೋಧನಾ ಮನೋಭಾವನೆ ಮತ್ತು ವೈಜ್ಞಾನಿಕ ಚಿಂತನೆಯನ್ನು ಎಲ್ಲರಲ್ಲಿ ಮೂಡಿಸುತ್ತಿದೆ. ಮುಖ್ಯವಾಗಿ ಮಕ್ಕಳಲ್ಲಿ ಮನೋವೈಜ್ಞಾನಿಕ ಮನೋಭಾವನೆ ಮೂಡಿಸುವಲ್ಲಿ ಶಾಲೆ ಸದಾ ಮುಂದೆ ಇದೆ ಎಂದು ಹೇಳಿದರು.
ಈ ವೇಳೆ ಶಾಲಾ ಅಧ್ಯಕ್ಷೆ ಉಷಾ ಶ್ರೀನಿವಾಸ್, ಮುಖ್ಯಶಿಕ್ಷಕಿ ಶೋಭಾವತಿ ಆರ್, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

