ನಮ್ಮದು ಸರ್ವ ಧರ್ಮ, ಸರ್ವ ಜಾತಿಯವರನ್ನೂ ಒಳಗೊಳ್ಳುವ ಸರ್ಕಾರ- ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ / ಬೆಂಗಳೂರು:
ಖಜಾನೆ ಖಾಲಿ ಎನ್ನುವ ವಿರೋಧ ಪಕ್ಷಗಳ ಸುಳ್ಳಿನ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

- Advertisement - 

ಉದ್ಘಾಟನೆಯಾದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯಿಂದಾಗಿ ಇಡೀ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಪರ್ವದ ವೇಗವನ್ನು ತೋರಿಸುತ್ತಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಇದುವರೆಗೂ ತೆಗೆದಿಟ್ಟಿರುವುದು ಮಾತ್ರವಲ್ಲದೆ ಇಷ್ಟು ಮೊತ್ತದ ಅಭಿವೃದ್ಧಿ ಕಾರ್ಯಗಳನ್ನೂ ನಾವು ನಡೆಸುತ್ತಿದ್ದೇವೆ. ಇದಕ್ಕೆ ಇಂದು ಇಲ್ಲಿ ಉದ್ಘಾಟನೆಗೊಂಡ ಅಭಿವೃದ್ಧಿಯೂ ಸೇರಿದೆ ಎಂದರು.

- Advertisement - 

ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ. ಜೊತೆಗೆ ಸಣ್ಣ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅಭಿವೃದ್ಧಿ ನಡೆಸುತ್ತಿದ್ದೇವೆ ಎನ್ನುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.  

ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ:
ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ ಬೇಕು ಎನ್ನುವುದೂ ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕ್ಷೇತ್ರದ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮನವಿಯಂತೆ ಎಲ್ಲಾ ಕಾಮಗಾರಿಗಳಿಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಬೇಕು, ಜಾತಿ ವ್ಯವಸ್ಥೆ ಮತ್ತು ವರ್ಗ ವ್ಯವಸ್ಥೆ ಹೋಗಬೇಕು ಆಗ ಮಾತ್ರ ದೇಶಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದಿದ್ದರು. ಹೀಗಾಗಿ ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದೆ. ನಮ್ಮದು ಸರ್ವ ಧರ್ಮ ಮತ್ತು ಸರ್ವ ಜಾತಿಯವರನ್ನು ಒಳಗೊಳ್ಳುವ ಸರ್ಕಾರ ಎಂದರು.

ನಾವು ಜನರನ್ನು ಮತ್ತು ಸಮಾಜವನ್ನು ಬೆಸೆಯುವ ಮೂಲಕ  ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ. ಶಿಡ್ಲಘಟ್ಟದ ನೇಕಾರ ಸಮುದಾಯಕ್ಕೂ ಅನುಕೂಲ ಮಾಡಿಕೊಡಲಾಗುವುದು. ನಾವು ನುಡಿದಂತೆ ನಡೆಯುತ್ತಿದ್ದೇವೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹೀಗಾಗಿ 2028 ರಲ್ಲೂ  ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ  ಎಂದರು.

 

 

Share This Article
error: Content is protected !!
";