2027ಕ್ಕೆ ಎತ್ತಿನಹೊಳೆ ನೀರು ನಮ್ಮ ಆರನೇ ಗ್ಯಾರಂಟಿ-ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ
ಜಿಲ್ಲೆಯ ಶಾಸಕರು ಪಂಚ ಪಾಂಡವರಂತೆ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ರಾಜ್ಯದಲ್ಲಿ ಅಭಿವೃದ್ಧಿಯ ಸಂಗಮವಾಗಿದೆ. 2 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಕೆಲಸವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದರೆ ನಮ್ಮ ಜನಪರ ಧೋರಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇಡೀ ಸರ್ಕಾರವೇ ಬಂದಿದೆ ಎಂದರೆ ನಮಗೆ ಜನರ ಮೇಲಿನ ಪ್ರೀತಿಯೇ ಕಾರಣ ಎಂದು ಹೇಳಿದರು.

ರಾಜ್ಯದ ಪ್ರತಿ ಮಹಿಳೆಯರು ಅವರ ಖಾತೆಗೆ ಹಣ ಬಂದಾಗಲೆಲ್ಲಾ ನಮ್ಮ ಸರ್ಕಾರವನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋದರೂ ನಮ್ಮ ಒಳಿತಿಗೆ ಪ್ರಾರ್ಥನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬಂದಾಗ ಮಹಿಳೆಯರು ಗೌರವದಿಂದ ಅವರಿಗೆ ನಮಿಸಿದರು. ಮಹಿಳೆಯರ ಬದುಕಿನಲ್ಲಿ ನಾವು ತಂದಿರುವ ಬದಲಾವಣೆಯನ್ನು ಇಡೀ ದೇಶವೇ ನೋಡುತ್ತಿದೆ ಎಂದರು.

- Advertisement - 

ಸತ್ಯಕ್ಕೂ ಸುಳ್ಳಿಗೂ ಎಷ್ಟು ಅಂತರ ಎಂದು ಅಕ್ಬರ್ ಒಮ್ಮೆ ಬೀರಬಲ್ ಅವರನ್ನು ಕೇಳುತ್ತಾನೆ. ಆಗ ಬೀರಬಲ್ ನಾಲ್ಕು ಬೆರಳಿನ ಅಂತರ ಎಂದು ಹೇಳುತ್ತಾರೆ. ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ಕೋಟಿ ಮೊತ್ತವನ್ನು ನೀಡಿದೆ. ಇದಕ್ಕೆ ನಿಮ್ಮೆಲ್ಲರ ಕಣ್ಣುಗಳೇ ಸಾಕ್ಷಿ ಎಂದು ಹೇಳಿದರು.

2027 ಕ್ಕೆ ಜಿಲ್ಲೆಗೆ ಎತ್ತಿನಹೊಳೆ ನೀರು:
ಸಚಿವರಾದ ಕೆ.ಎಚ್.ಮುನಿಯಪ್ಪ ಅವರು, ಸುಧಾಕರ್ ಅವರು ಹಾಗೂ ಕೃಷ್ಣಬೈರೇಗೌಡರು ನನ್ನ ಬೆನ್ನತ್ತಿದ್ದು 2027 ರ ಹೊತ್ತಿಗೆ ಎರಡು ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪರ್ಯಾಯವಾಗಿ ಕಂದಾಯ ಭೂಮಿ ನೀಡಿದ್ದರೂ ಕೇಂದ್ರ ಪರಿಸರ ಇಲಾಖೆ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡುತ್ತಿಲ್ಲ ಎಂದರು.

ಕೆ.ಸಿ. ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 143 ಕೆರೆ ತುಂಬಿಸಲಾಗಿದೆ. 2ನೇ ಹಂತದಲ್ಲಿ 272 ಕೆರೆ ಭರ್ತಿ ಮಾಡುತ್ತಿದ್ದೇವೆ. ಈ ಯೋಜನೆಯನ್ನು ವಿಶ್ವಬ್ಯಾಂಕ್ ಕೂಡ ಹೊಗಳಿದೆ. ಎಚ್.ಎನ್.ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 65 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಬೆಂಗಳೂರಲ್ಲಿ ಕೆರೆಗಳ ಇಂಟರ್ ಲಿಂಕ್ ಮಾಡೋಕೆ ಅಂತ 1700 ಕೋಟಿ ರೂಪಾಯಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನೆಲಮಂಗಲದಲ್ಲಿ ವೃಷಭಾವತಿಯಿಂದ 70 ಕೆರೆ ತುಂಬಿಸಲಾಗುತ್ತಿದೆ ಎಂದರು.

 

Share This Article
error: Content is protected !!
";