ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ
2027ಕ್ಕೆ ಎತ್ತಿನಹೊಳೆ ನೀರನ್ನು ಕೆರೆ ಕಟ್ಟೆಗಳಿಗೆ ಭರ್ತಿ ಮಾಡಲಾಗುತ್ತಿದ್ದು ಇದು ನಮ್ಮ ಆರನೇ ಗ್ಯಾರಂಟಿಯಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆಗಳನ್ನು ತುಂಬಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ. ವ್ಯವಸಾಯಕ್ಕೆ ಹಾಗೂ ಕುಡಿಯುವುದಕ್ಕೆ ನೀರನ್ನು ನೀಡುವುದೇ ನಮ್ಮ ಉದ್ದೇಶ. ಏಳನೇ ಗ್ಯಾರಂಟಿಯಾಗಿ 1,11,11,111 ಜನರಿಗೆ ಖಾತೆಗಳನ್ನು ನೀಡಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಹತ್ತು ಕಿಲೋ ಅಕ್ಕಿ ನೀಡುತ್ತಿದ್ದೆವು. ಆದರೆ ಐದು ಕಿಲೋ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಕಾರಣಕ್ಕೆ ಅಡುಗೆ ಎಣ್ಣೆ, ಬೇಳೆಕಾಳುಗಳ ಕಿಟ್ ನೀಡುವ ಆಲೋಚನೆ ಮಾಡಿದ್ದೇವೆ. ಶೀಘ್ರದಲ್ಲೆ ಎಲ್ಲರಿಗೂ ಈ ಯೋಜನೆ ತಲುಪಲಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನತೆ ಬಗ್ಗೆ ನನಗೆ ಅಪಾರ ಗೌರವ. ಏಕೆಂದರೆ ನೀವು ಶ್ರಮ ಜೀವಿಗಳು, ನೀರಿನ ಬೆಲೆ ಅರಿತಿರುವವರು. ತರಕಾರಿ, ಹೂ, ಹಣ್ಣು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ರಾಜ್ಯಕ್ಕೆ ನೀಡುತ್ತಿರುವವರು. ಅಶುದ್ಧ ನೀರನ್ನು ಶುದ್ಧೀಕರಣಗೊಳಿಸಿ ಅದನ್ನು ನಿಮ್ಮ ಕೆರೆಗಳಿಗೆ ಹರಿಸುವ ಕೆಲಸ ಮಾಡಲಾಗುತ್ತಿದೆ. ಇಡೀ ದೇಶವೇ ಈ ಯೋಜನೆಯನ್ನು ಹೊಗಳುತ್ತಿದೆ ಎಂದು ಹೇಳಿದರು.
ಶಿಡ್ಲಘಟ್ಟದ ನೀರು ಅತ್ಯುತ್ತಮವಾದುದು, ರೇಷ್ಮೆ ನೂಲು ಉತ್ತಮವಾಗಿ ಬರುತ್ತದೆ ಎಂದು ಇಲ್ಲಿಂದ ಟ್ಯಾಂಕರ್ ನಲ್ಲಿ ನೀರು ತಂದು ನಮ್ಮ ಊರಿನಲ್ಲಿ ನೂಲು ತೆಗೆಯಲಾಗುತ್ತದೆ. ಚೈನಾದಿಂದ ರೇಷ್ಮೆ ಆಮದು ಕಡಿಮೆಯಾದ ಕಾರಣಕ್ಕೆ ನಮ್ಮ ರೇಷ್ಮೆ ಗೆ ಅತ್ಯುತ್ತಮ ಬೆಲೆ ಬಂದಿದೆ. ಈಗ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಅನೇಕ ಕಡೆ ರೇಷ್ಮೆ ಬೆಳೆಯಲಾಗುತ್ತಿದೆ ಎಂದರು.
ಪಂಚ ಪಾಂಡವರಂತೆ ಜಿಲ್ಲೆಯ ಅಭಿವೃದ್ದಿಗೆ ಕೆಲಸ:
ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ, ಈ ಧಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಹೇಳಿದ್ದೇನೆ. ಡಾ.ಸುಧಾಕರ್ ಅವರು, ಸುಬ್ಬಾರೆಡ್ಡಿ ಅವರು, ಪುಟ್ಟಸ್ವಾಮಿ ಗೌಡರು, ಪ್ರದೀಪ್ ಈಶ್ವರ್ ಅವರು, ರವಿಕುಮಾರ್ ಅವರು ಜಿಲ್ಲೆಯ ಅಭಿವೃದ್ದಿಗೆ ಕೈ ಜೋಡಿಸಿ ಪಂಚ ಪಾಂಡವರಂತೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಜನರ, ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್,
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ್ ಬಿ.ಎಸ್, ಶಾಸಕರುಗಳಾದ ಬಿ.ಎನ್. ರವಿಕುಮಾರ್, ಎಸ್.ಎನ್. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್ ಪಿ.ಇ, ಕೆ.ಹೆಚ್. ಪುಟ್ಟಸ್ವಾಮಿಗೌಡ, ಡಾ. ಹೆಚ್.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಡಾ. ವೈ. ನವೀನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲುಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

