ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪ್ರಾಪ್ತ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪೋಕ್ಸೋ ಪ್ರಕರಣದಡಿಯಲ್ಲಿ ಜೈಲಲ್ಲಿ ಮತ್ತು ಜಾಮೀನಿನ ಮೇಲೆ ಹೊರಗಿದ್ದ ಶಿವಮೂರ್ತಿ ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೋಷಿ ಎಂದು ಗೌರವಾನ್ವಿತ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ. ಬುಧವಾರ ಮಧ್ಯಾಹ್ನ 2 : 45ಕ್ಕೆ ತೆರೆದ ನ್ಯಾಯಾಲಯದಲ್ಲಿ ಗೌರವಾನ್ವಿತ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ಕೋರ್ಟ್‌ನ್ಯಾಯಾಧೀಶರಾದ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ಅವರು ತೀರ್ಪು ಪ್ರಕಟಿಸಿದರು.
ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.

ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಕಳೆದ ನ.18ರಂದು ವಿಚಾರಣೆ ಪೂರ್ಣಗೊಳಿಸಿತಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ನವಂಬರ್-26ರ ಬುಧವಾರ ಪ್ರಕಟಿಸುವುದಾಗಿ ಹೇಳಿತ್ತು.
ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪರವಾಗಿ ಕೋರ್ಟ್ನಲ್ಲಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ ಸ್ವಾಮೀಜಿ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಪ್ರಾಸಿಕ್ಯೂಷನಲ್ ಪರ ವಕೀಲರು ಸಹ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲದೆ ಇತರೆ ಮಕ್ಕಳ ಮೇಲೂ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಠದಲ್ಲಿನ ಅಡುಗೆ ಕೆಲಸದ ಮಹಿಳೆ ದೂರಿನಲ್ಲಿ ವಿವರಿಸಿದ್ದರು.
ಇದರ ಆಧಾರದಡಿ ಮೈಸೂರಿನ ನಜರ್‌ಬಾದ್‌ಪೊಲೀಸ್‌ಠಾಣೆಯಲ್ಲಿ 2022ರ ಅಕ್ಟೋಬರ್ 13ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ತದನಂತರ ಈ ದೂರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಎಫ್‌ಐಆರ್‌ನಲ್ಲಿ ಆರೋಪಿ ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376 (ಸಿ), 376 (2) (ಎನ್), 376 (ಎಬಿ), 376 (3), 366, 366 (ಎ), 323, 114 ಮತ್ತು 34, ಪೋಕ್ಸೊ ಕಾಯಿದೆ ಸೆಕ್ಷನ್ 5 (ಎಲ್), 6,7 ಮತ್ತು 17, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್(ಎಫ್) ಮತ್ತು 7 ಹಾಗೂ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಇಬ್ಬರು ಸಂತ್ರಸ್ತೆಯರು ಇರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್-
ಬುಧವಾರ ತೀರ್ಪು ಪ್ರಕಟವಾಗಲಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ತೀರ್ಪು ಏನು ಬರುತ್ತದೋ ಎಂದು ಮಠದ ಭಕ್ತರು, ಸಾರ್ವಜನಿಕರು ಕುತೂಹಲದಿಂದ ತೀರ್ಪು ಪ್ರಕಟದ ಸಮಯಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದರು.
ತೀರ್ಪು ಪ್ರಕಟವಾಗುತ್ತಿದ್ದಂತೆ ಭಕ್ತರ ಸಂಭ್ರಮ, ಮುಖದಲ್ಲಿ ಎದ್ದು ಕಾಣುತ್ತಿತ್ತು. ಮಹತ್ವದ ತೀರ್ಪಿಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಾಕ್ಷಿ ಆಗಿದೆ.
2ನೇ ಪೋಕ್ಸೋ ಪ್ರಕರಣಕ್ಕೆ ತಡೆಯಾಜ್ಞೆ-
ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿದ್ದ 2ನೇ ಪೋಕ್ಸೋ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ಇರುವುದರಿಂದ ಚಿತ್ರದುರ್ಗ ಮುರುಘಾ ಮಠಕ್ಕೆ ತೆರಳದೆ ದಾವಣಗೆರೆಯ ಮುರುಘಾ ಮಠದ ಶಾಖೆಗೆ ತೆರಳಿದರು. 2ನೇ ಪ್ರಕರಣಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಂಡಲ್ಲಿ ಮತ್ತೆ ಶಿವಮೂರ್ತಿ ಶರಣರು ಜಾಮೀನು ಪಡೆಯಬೇಕಾಗುತ್ತದೆ. ಅಲ್ಲಿಯ ತನಕ ಅವರು ಚಿತ್ರದುರ್ಗ ಮಠಕ್ಕೆ ಭೇಟಿ ನೀಡುವಂತಿಲ್ಲ. ಹಾಗಾಗಿ ಸದ್ಯಕ್ಕೆ ದಾವಣಗೆರೆ ಶಾಖಾ ಮಠದಲ್ಲೇ ಅವರು ಉಳಿಯಬೇಕಾಗಿದೆ.

