ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಶೀಘ್ರ ಪರಿಹಾರ-ಮಲ್ಲಿಕಾರ್ಜುನ್ ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರ ಹಂಚಿಕೆ ಸೇರಿದಂತೆ ಇತರೆ ಗೊಂದಲಗಳಿಗೆ ತೆರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಮೂರರಿಂದ ನಾಲ್ಕು ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಮೊದಲ ಬಾರಿಗೆ ಅಧಿಕೃತ ಹೇಳಿಕೆಯೊಂದು ಹೊರಬಿದ್ದಂತಾಗಿದೆ.
ಈವರೆಗೂ ಪ್ರಮುಖ ನಾಯಕರು ದೆಹಲಿಗೆ ಹೋಗಿದ್ದು
, ಮಾತುಕತೆ ನಡೆದಿದ್ದು ಹಾಗೂ ಆಂತರಿಕ ಬೆಳವಣಿಗೆಗಳ ಬಗ್ಗೆ ವರದಿಯಾಗುತ್ತಿತ್ತೇ ವಿನಃ ಆ ಬಗ್ಗೆ ಅಧಿಕೃತವಾಗಿ ಹೈಕಮಾಂಡ್ ನಾಯಕರು ಹೇಳಿಕೆ ನೀಡಿರಲಿಲ್ಲ.

- Advertisement - 

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ದೆಹಲಿಗೆ ತೆರಳುವ ಮುನ್ನ ಗುರುವಾರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ಮೂರ್ನಾಲ್ಕು ನಾಯಕರನ್ನು ದೆಹಲಿಗೆ ಕರೆಸುತ್ತೇವೆ. ಎಲ್ಲರೂ ಒಟ್ಟಿಗೆ ಕೂತು ಚರ್ಚೆ ನಡೆಸುತ್ತೇವೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ. ಅದೊಂದು ತಂಡ. ಹೈಕಮಾಂಡ್ ಒಟ್ಟಿಗೆ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.

 ಆ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಇರುತ್ತಾರೆ. ಮುಂದೆ ಏನು ಮಾಡಬೇಕೆಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement - 

ಬುಧವಾರವಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಪ್ಲೀಸ್ ವೇಟ್ ಎಂಬ ಸಂದೇಶ ಕಳುಹಿಸಿದ್ದರು. ಅದಾದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಮತ್ತೆ ಬೆಂಗಳೂರಿಗೆ ಬಂದಿದ್ದರು.
ಬೆಂಗಳೂರಿಗೆ ಬಂದ ನಂತರ ರಾಹುಲ್ ಗಾಂಧಿ ಜೊತೆ ಅವರು ಸುಮಾರು
25 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದರು.

ಬಿಜೆಪಿ, ಮಾಧ್ಯಮದ ವಿರುದ್ಧ ಗೂಬೆಕೂರಿಸಿದ್ದ ರಣದೀಪ್ ಸುರ್ಜೇವಾಲಾ ಕರ್ನಾಟಕ ರಾಜಕೀಯದಲ್ಲಿ ನಡೆಯುತ್ತಿರುವ ನವೆಂಬರ್​ ಕ್ರಾಂತಿಯ ಚರ್ಚೆ ಪ್ರತಿಪಕ್ಷ ಬಿಜೆಪಿಯ ಅಪಪ್ರಚಾರ ಮತ್ತು ಮಾಧ್ಯಮ ಸೃಷ್ಟಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸುರ್ಜೇವಾಲಾ ಕೆಲವು ದಿನಗಳ ಹಿಂದೆ ಹೇಳಿದ್ದರು.

ಮಾಧ್ಯಮದ ಒಂದು ಭಾಗವು ರಾಜ್ಯ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಜೊತೆ ಚರ್ಚೆ ನಡೆಸಲಾಗಿದ್ದು, ಅಪಪ್ರಚಾರದ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ, ಸರ್ಕಾರದ ಭರವಸೆ ದುರ್ಬಲಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಸುರ್ಜೇವಾಲ ಎಕ್ಸ್ ಸಂದೇಶದ ಮೂಲಕ ಹೇಳಿದ್ದರು.

 

 

 

Share This Article
error: Content is protected !!
";