ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ರೈತ ಸಮುದಾಯಕ್ಕೆ ಸರ್ಕಾರ ಬೆಳೆವಿಮೆ ಹಾಗೂ ಬೆಳೆನಷ್ಟ ಪರಿಹಾರವನ್ನು ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯೆ ವಹಿಸಿದ್ದು, ಸಾವಿರಾರು ರೈತರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ರೈತರಿಗೆ ಬೆಳೆನಷ್ಟಪರಿಹಾರ, ಬೆಳೆವಿಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರವಾಸಿಮಂದಿರದಿಂದ ಆರಂಭವಾದ ಪ್ರತಿಭಟನೆ ವಾಲ್ಮೀಕಿ, ಅಂಬೇಡ್ಕರ್ ನೆಹರೂ ವೃತ್ತಗಳ ಮೂಲಕ ತಾಲ್ಲೂಕು ಕಚೇರಿಗೆ ಬಂದುತಲುಪಿತು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬೆಳೆನಷ್ಟ ಹಾಗೂ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಪ್ರತಿಭಟನೆ, ಧರಣಿಸತ್ಯಾಗ್ರಹದ ಮೂಲಕ ಒತ್ತಾಯಿಸುತ್ತಾ ಬಂದಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯೆ ವಹಿಸಿದೆ.
ರೈತರ ಬದುಕನ್ನು ಉತ್ತಮ ಪಡಿಸುವ ಯಾವುದೇ ಯೋಜನೆ ಸರ್ಕಾರದಲ್ಲಿಲ್ಲ. ಕೇವಲ ರಾಜ್ಯದ ಆಯ್ದ ರೈತರ ಬೆಳೆನಷ್ಟ ಪರಿಹಾರ ಮಾತ್ರ ನೀಡಿ ರೈತರ ಕಣ್ಣೊರೆಸುವ ಕೆಲಸ ಮಾಡಿದೆ. ಆದರೆ, ಬಹುತೇಕ ರೈತರು ಪರಿಹಾರವಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕು, ಇಲ್ಲವಾದರೆ ಸರ್ಕಾರದ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ತಹಶೀಲ್ಧಾರ್ ಪರವಾಗಿ ಮನವಿ ಸ್ವೀಕರಿಸಿ ಶಿರಸ್ತೇದಾರ್ ಗಿರೀಶ್, ತಾವು ಮುಖ್ಯಮಂತ್ರಿಗಳಿಗೆ ನೀಡಿದ ಮನವಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮುಂದಿನ ಆದೇಶಕ್ಕಾಗಿ ಕಳಿಸುವ ಭರವಸೆ ನೀಡಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ತಾಲ್ಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುರೇಶ್, ದೇವರಾಜರೆಡ್ಡಿ, ಈಶ್ವರನಾಯಕ, ಡಾ.ರಾಮರಾಜ್, ದೊರೆನಾಗರಾಜು, ದಿನೇಶ್‌ರೆಡ್ಡಿ, ಶ್ರೀನಿವಾಸ್, ಡಿ.ಎಂ.ತಿಪ್ಪೇಸ್ವಾಮಿ, ಜಾಜೂರುರವಿ, ಜಗದಾಂಭ, ಸಹನಾ, ಶಾಂತಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

