ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಬಿಜೆಪಿ ಮಂಡಲ ವತಿಯಿಂದ ಎತ್ತಿನ ಗಾಡಿ ಮೂಲಕ ಮೆರವಣಿಗೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ನಂತರ ತಾಲೂಕು ಬಿಜೆಪಿ ಅಧ್ಯಕ್ಷ ಕೆ ಅಭಿನಂದನ್ ಮಾತನಾಡಿ ಮೆಕ್ಕೆಜೋಳ, ರಾಗಿ, ಶೇಂಗಾ, ಕಡಲೆ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಸರ್ಕಾರ ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ರೈತರು ಮಳೆ, ಚಳಿ, ಗಾಳಿ ಎನ್ನದೆ ಬೆವರು ಸುರಿಸಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಸರ್ಕಾರದ ಸಚಿವರು ಶಾಸಕರು, ಅಬಕಾರಿ, ಸಕ್ಕರೆ ಕಾರ್ಖಾನೆ, ಮತ್ತು ಶಿಕ್ಷಣ ಸಂಸ್ಥೆಗಳ ಲಾಬಿಗಳಲ್ಲಿ ತೊಡಗಿದ್ದಾರೆ. ಯಾರೊಬ್ಬರೂ ಸಹ ಅನ್ನದಾತನ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ರೈತರು ಅಭಿವೃದ್ಧಿ ಹೊಂದಲು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರಾಜ್ಯದ 52 ಲಕ್ಷ ರೈತರಿಗೆ 6 ಸಾವಿರ ರೂಪಾಯಿ ವಾರ್ಷಿಕ ನೀಡಲಾಗುತ್ತದೆ. ಧನಧಾನ್ಯ ಯೋಜನೆ ಅಡಿಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಒಟ್ಟು ರಾಜ್ಯದ ಮೂರು ಜಿಲ್ಲೆಗಳು ಒಳಗೊಂಡಂತೆ
ದೇಶಾದ್ಯಂತ 100 ಜಿಲ್ಲೆಗಳ ರೈತರಿಗೆ 24 ಸಾವಿರ ಕೋಟಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೊತ್ತವನ್ನು 3 ರಿಂದ 5ಲಕ್ಷಕ್ಕೆ ಏರಿಸಲಾಗಿದೆ. ದೇಶದಲ್ಲಿ ಹನಿ ನೀರಾವರಿ ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಕೃಷಿ ಸಿಂಚ ಯೋಜನೆ ಅಡಿಯಲ್ಲಿ 93 ಸಾವಿರ ಕೋಟಿ ಹಣವನ್ನು ರೈತರಿಗೆ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳೇ ದೊಡ್ಡ ಸಾಧನೆಯಂತೆ ತೋರಿಸುತ್ತಿದೆ.
ಈ ಸರ್ಕಾರ ಅಭಿವೃದ್ಧಿ ಮಾಡದೇ, ಭ್ರಷ್ಟಾಚಾರದಲ್ಲಿ ಮುಳುಗಿದೆ. ರೈತರ ಕಡೆ ಒಲವು ತೋರಿಸದೇ ಇದೀಗ ಕುರ್ಚಿಗಾಗಿ ಇಬ್ಬರ ನಡುವೆ ಕುರ್ಚಿ ಕದನ ಆರಂಭವಾಗಿದ್ದು, ರೈತರ ಬದುಕನ್ನು ದುಸ್ಥಿತಿಗೆ ತಳ್ಳಿ, ಸಿಎಂ ಕುರ್ಚಿಯನ್ನು ಭದ್ರ ಮಾಡಿಕೊಳ್ಳಲು ಪರದಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ,ಈರುಳ್ಳಿ, ಶೇಂಗಾ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ನಡೆಸುವವರು ಕುರ್ಚಿ ಕದನ ಬಿಟ್ಟು ಅನ್ನದಾತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಜೆ ಬಿ ರಾಜು, ಉಮೇಶ್, ಬಸವರಾಜ್ ನಾಯ್ಕ್, ಮಂಜುನಾಥ್, ಸಿದ್ದಮ್ಮ,ಮುರಳೀಧರ, ನಿತಿನ್ ಗೌಡ, ಯೋಗೇಶ್, ನಾಗೇಂದ್ರಪ್ಪ, ಗೋವಿಂದಪ್ಪ, ಕೆಟಿ. ಹನುಮಂತ್, ಪ್ರಜ್ವಲ್, ಶಶಿಕುಮಾರ್, ಕೃಷ್ಣ, ನಾಗೇಂದ್ರ, ಚಂದ್ರಹಾಸ್, ವಾಸುದೇವ್, ಬಸವರಾಜ್, ತಿಪ್ಪೇಶ್, ಮಿಥುನ್, ಪಾರ್ಥ, ಹರ್ತಿರಜ್, ಹರೀಶ್, ಗುರು, ಆಸೀಫ್ , ಮಾರಣ್ಣ, ತಿಪ್ಪೇಸ್ವಾಮಿ, ಚಂದ್ರು, ದರ್ಶನ್,ಆಟೋದೆವು, ಕೃಷ್ಣ, ಜಬಿ,ಮಂಜುಳ, ಮತ್ತು ಮಹಿಳೆಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.

