ಮತಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಚುನಾವಣೆ ಆಯೋಗ ಚಿಂತನೆ

News Desk

  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಷ್ಟು ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳಿಗೆ ಹೆಚ್ಚು ಆಸಕ್ತಿ ತೋರದಿರುವುದು ಕಂಡುಬಂದಿದ್ದು
, ಈ ಕಾರಣದಿಂದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯಲ್ಲಿ ನೊಂದಣಿ ಮಾಡಿಸಿಕೊಳ್ಳದೆ ಅರ್ಹ ಮತದಾರರು ಹೊರಗುಳಿಯುತ್ತಾರೆ. ಎಲ್ಲಾ ಅರ್ಹ ಮತದಾರರು ಹೆಸರು ನೊಂದಾಯಿಸಿಕೊಳ್ಳಲು ಅನುವಾಗುವಂತೆ, ಪದವಿ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಭಾರತೀಯ ಚುನಾವಣೆ ಆಯೋಗದ ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಗ್ನೇಯ ಪದವಿಧರ ಕ್ಷೇತ್ರದ ಮತಪಟ್ಟಿ ತಯಾರಿಕೆ ಸಿದ್ದತೆಗಳನ್ನು ವೀಕ್ಷಿಸಿದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

- Advertisement - 

2016 ರ ಸರ್ವೋಚ್ಛ ನಾಯಾಲಯದ ತೀರ್ಪಿನ ಅನುಸಾರ ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುವ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಒಂದು ವರ್ಷ ಮುನ್ನವೇ ಮತದಾರರ ಪಟ್ಟಿ ತಯಾರಿಕೆಗೆ ಸಿದ್ದತೆ ಆರಂಭವಾಗುತ್ತಿದೆ. ಈ ವೇಳೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತಿದೆ. ಈಗಿರುವ ನೊಂದಣಿ ನಿಯಮಗಳನ್ನು ಸರಳ ಹಾಗೂ ಪಾದರ್ಶಕವಾಗಿಸುವ ಸಲುವಾಗಿ ದೇಶದ ಎಲ್ಲಾ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗಳಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ತಿಳಿಸಿದರು.

ಮತದಾರರ ನೊಂದಣಿ ಸಂಖ್ಯೆ ಹೆಚ್ಚಳಕ್ಕೆ ಮೆಚ್ಚುಗೆ:
2020 ರಲ್ಲಿ ಆಗ್ನೇಯ ಪದವಿಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 21,024 ಮತದಾರರು ಇದ್ದರು. ಸದ್ಯ ಸೆ.30 ರಿಂದ ನ.06 ವರೆಗೆ ಜರುಗಿದ ಆಗ್ನೇಯ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಪ್ರಕ್ರಿಯೆಯಲ್ಲಿ 37,976 ಜನರು ಫಾರಂ-18 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 211 ನೊಂದಣಿ ಅರ್ಜಿಗಳನ್ನು ನಾನಾ ಕಾರಣಗಳಿಗೆ ತಿರಸ್ಕರಿಸಲಾಗಿದೆ. ಇತರೆ ಜಿಲ್ಲೆಗೆ ಸೇರಿದ 567 ಅರ್ಜಿಗಳು ಸ್ವೀಕೃತವಾಗಿದೆ. ನ.18 ರಂದು ಆಗ್ನೇಯ ಪದವಿಧರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು ಒಟ್ಟು 37,198 ಮತದಾರರು ಇದ್ದಾರೆ. ಹೆಚ್ಚಿನ ಮತದಾರರು ನೊಂದಣಿ ಮಾಡಿಸಲು ಶ್ರಮಿಸಿದ ಅಧಿಕಾರಿಗಳ ಕಾರ್ಯಕ್ಕೆ  ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement - 

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಸಹಾಯ:
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಜರುಗಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲ್ಲಿ ಗಣತಿದಾರರು ಜಿಲ್ಲೆಯ ಪ್ರತಿ ಕುಟುಂಬದಲ್ಲಿನ ಸದಸ್ಯರ ಶೈಕ್ಷಣಿಕ ವಿವರ ಪಡೆಯುವಾಗ, ಪದವಿ ಶಿಕ್ಷಣ ಪೂರೈಸಿದವರಿಗೆ ಆಗ್ನೇಯ ಪದವಿಧರ ಕ್ಷೇತ್ರದ ಮತದಾರರ ನೊಂದಣಿ ಕುರಿತಂತೆ ಅರಿವು ಮೂಡಿಸಿದ ಪರಿಣಾಮವಾಗಿ, ಮತದಾರರ ನೊಂದಣಿ ಹೆಚ್ಚಳಕ್ಕೆ ಗುರಿ ನಿಗದಿಪಡಿಸಲಾಯಿತು.

ಬಿಎಲ್‍ಓಗಳ ಮೂಲಕ ಮನೆ ಮನೆಗೆ ತೆರಳಿ ಅರ್ಹ ಮತದಾರರು ನೊಂದಣಿ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಯಿತು. ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಯಿತು. ಇದರ ಪರಿಣಾಮ ಮತದಾರರ ನೊಂದಣಿ ಸಂಖ್ಯೆ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 6 ವಿಧಾನ ಸಭಾ ಕ್ಷೇತ್ರಗಳಿದ್ದು, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣಾಧಿಕಾರಿಗಳಾಗಿದ್ದಾರೆ. ಮತದಾರರ ನೊಂದಣಿಗಾಗಿ ಜಿಲ್ಲೆಗೆ 1 ಸಹಾಯಕ ಚುನಾವಣಾಧಿಕಾರಿತಾಲ್ಲೂಕುಗಳಿಗೆ ಒಟ್ಟು 13 ಸಹಾಯಕ ಚುನಾವಣಾಧಿಕಾರಿಗಳು, 7 ನಿರ್ಧಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ.

ಚುನಾವಣಾ ಆಯೋಗ ಕಾಲೇಜು ಶಿಕ್ಷಣ ಇಲಾಖೆಯಿಂದ ವಿವಿಧ ವಿಶ್ವ ವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪದವಿ ಪಡೆದವರ ಹೆಸರು, ವಿಳಾಸದ ಮಾಹಿತಿ ದತ್ತಾಂಶವನ್ನು ಆಯೋಗದ ವೆಬ್‍ಸೈಟ್‍ನೊಂದಿಗೆ ಸಮೀಕರಿಸಿದರೆ ಹೆಚ್ಚು ನಿಖರವಾಗಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ನೊಂದಣಿ ಮಾಡಬಹುದು. ಇದರಿಂದ ದಾಖಲೆಗಳ ಪರಿಶೀಲನೆಗೂ ಅನುಕೂಲವಾಗುತ್ತದೆ. ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಸಲಹೆಗಳನ್ನು ಲಿಖಿತರೂಪದಲ್ಲಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಭಾರತೀಯ ಚುನಾವಣೆ ಆಯೋಗದ ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಪದವಿಧರ ಮತದಾರ ನೊಂದಣಿಯಲ್ಲಿ  ಸ್ವೀಕೃತ ಹಾಗೂ ತಿರಸ್ಕøತ ಫಾರಂ-18 ಅರ್ಜಿ ನಮೂನೆಗಳ ವೀಕ್ಷಣೆ ನಡೆಸಿದರು. ನಂತರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿದ ಮತದಾರ ನೊಂದಣಿ ನಿರ್ಧಿಷ್ಟಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಶೀಶ್ ರಾಮ್, ಸಹಾಯಕ ನೊಂದಣಾಧಿಕಾರಿಗಳಾದ ರೈಲ್ವೇ ವಿಶೇಷ ಭೂಸ್ವಾಧೀನಾಧಿಕಾರಿ ಎನ್.ವೆಂಕಟೇಶ್ ನಾಯ್ಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಚಂದ್ರಕುಮಾರ್, ಭದ್ರಾ ಮೇಲ್ದಂಡೆ ಭೂಸ್ವಾಧೀನಾಧಿಕಾರಿ ಟಿ.ಸುರೇಶ್ ಕುಮಾರ್ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

 

Share This Article
error: Content is protected !!
";