ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದ್ವಿಚಕ್ರ ವಾಹನ ಒಂದು ದೊಡ್ಡ ಕಂಟೈನರ್‌ಗೆ ಡಿಕ್ಕಿಯಾಗಿ ತಾಯಿ ಹಾಗೂ ಮಗ ಇಬ್ಬರೂ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಭಾನುವಾರ ಬೆಳಗ್ಗೆ ನಗರದ ಮೈಸೂರು ರಸ್ತೆಯಲ್ಲಿ ಸಂಭವಿಸಿದೆ.
ಕಂಟೈನರ್‌ಗೆ ಡಿಕ್ಕಿಯಾಗುತ್ತಿದ್ದಂತೆ ಸ್ಕೂಟರ್ನಿಂದ ನೆಲಕ್ಕೆ ಬಿದ್ದ ತಾಯಿ ಅಶ್ವಿನಿ (41) ಮತ್ತು ಅವರ ಪುತ್ರ ಅಭಿಲಾಶ್ (19) ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಹೆಲ್ಮೆಟ್ ಧರಿಸದ ತಾಯಿ-ಮಗ: ಸ್ಕೂಟರ್‌ನಲ್ಲಿ ಹೆಲ್ಮೆಟ್ ಇದ್ದರೂ ತಾಯಿ ಮತ್ತು ಮಗ ಇಬ್ಬರೂ ಹೆಲ್ಮೆಟ್ ಧರಿಸದೆ ಕೆ.ಆರ್. ಮಾರ್ಕೆಟ್‌ನತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಮತ್ತು ಕಂಟೈನರ್ ನಡುವಿನ ಸಣ್ಣ ಜಾಗದಲ್ಲಿ ಸ್ಕೂಟರ್ ಚಲಾಯಿಸಲು ಯತ್ನಿಸಿದಾಗ, ಕಂಟೈನರ್‌ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರಿಗೂ ತಲೆಗೆ ತೀವ್ರ ಗಾಯಗಳಾಗಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ.
ಹೆಲ್ಮೆಟ್ ಇದ್ದರೂ ಸಹ ಧರಿಸದೆ ಸ್ಕೂಟರ್‌ನಲ್ಲಿ ಪ್ರಯಾಣಿಸಿರುವುದು ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿಯನ್ನು ಬಿಡಲು ಹೊರಟಿದ್ದ ಮಗ:
ಮೃತರು ದೊಡ್ಡಗೊಲ್ಲರಹಟ್ಟಿಯವರು. ಅಶ್ವಿನಿ ಅವರು ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ತಾಯಿಯನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಬರಲು ಪುತ್ರ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

