ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ)ದ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಅಕ್ಟೋಬರ್ 3ರಂದು ಗಾಂಧಿ ಕುಟುಂಬ ಮತ್ತು ಇತರ ಏಳು ಜನರ ವಿರುದ್ಧ ದೂರು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬವು ವೈಯಕ್ತಿಕ ಲಾಭಕ್ಕಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
FIR ದಾಖಲು?: ಐಪಿಸಿಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 403 (ಆಸ್ತಿ ದುರುಪಯೋಗ), 406 (ನಂಬಿಕೆ ದ್ರೋಹಕ್ಕೆ ಕ್ರಿಮಿನಲ್ ಶಿಕ್ಷೆ) ಮತ್ತು 420 (ವಂಚನೆ) ಅಡಿಯಲ್ಲಿ, ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕರಾದ ಸುಮನ್ ದುಬೆ ಮತ್ತು ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್ (ವೈಐ) ಮತ್ತು ಡೋಟೆಕ್ಸ್ ಮರ್ಚಂಡೈಸ್ ಲಿಮಿಟೆಡ್, ಡೋಟೆಕ್ಸ್ ಪ್ರವರ್ತಕ ಸುನಿಲ್ ಭಂಡಾರಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 66(2) ಅಡಿಯಲ್ಲಿ ತನಗಿರುವ ಅಧಿಕಾರ ಬಳಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು 2014 ಜೂನ್ 26ರಂದು ನ್ಯಾಷನಲ್ ಹೆರಾಲ್ಡ್ ವ್ಯವಹಾರಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಸಲ್ಲಿಸಿದ ಖಾಸಗಿ ದೂರನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀಡಿದ ಆದೇಶದಿಂದ ಬಂದಿರುವ ಚಾರ್ಜ್‌ಶೀಟ್ ಮತ್ತು ಇ.ಡಿ ಪ್ರಕರಣವನ್ನು ಬಲಪಡಿಸಲು ಈ ಹೊಸ ಎಫ್‌ಐಆರ್ ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎಜೆಎಲ್‌ಗೆ ಸೇರಿದ ಎರಡು ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದಿವಂಗತ ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ದುಬೆ, ಪಿತ್ರೋಡಾ ಮತ್ತು ಖಾಸಗಿ ಕಂಪನಿ ಯಂಗ್ ಇಂಡಿಯನ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಇ.ಡಿ ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ವಿಚಾರಣೆ ನಿಗದಿ:
ದೆಹಲಿ ನ್ಯಾಯಾಲಯಕ್ಕೆ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಇ.ಡಿ ಆರೋಪಪಟ್ಟಿಯಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಡಿಸೆಂಬರ್ 16ರಂದು ಮುಂದಿನ ವಿಚಾರಣೆ ನಿಗದಿ ಮಾಡಲಾಗಿದೆ.
ಕಾಂಗ್ರೆಸ್ ಆಕ್ರೋಶ:
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್ ಮಾಡಿ, ಬಿಜೆಪಿಯ ಮೋದಿ- ಅಮಿತ್ ಶಾ ಜೋಡಿಯು ಕಾಂಗ್ರೆಸ್‌ನ ಉನ್ನತ ನಾಯಕರ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಸೇಡಿನ ದುರುದ್ದೇಶ ಪೂರಿತ ರಾಜಕೀಯ ಮುಂದುವರೆಸಿದೆ.
ಬೆದರಿಕೆ ಹಾಕುವವರು ಸ್ವತಃ ಅಸುರಕ್ಷಿತರು ಮತ್ತು ಭಯಭೀತರಾಗಿದ್ದಾರೆ. ನ್ಯಾಷನ್‌ಹೆರಾಲ್ಡ್‌ಪ್ರಕರಣ ಸಂಪೂರ್ಣ ನಕಲಿ. ಅಂತಿಮವಾಗಿ ನ್ಯಾಯ ಜಯ ಸಾಧಿಸುತ್ತದೆ. ಸತ್ಯಮೇವ ಜಯತೇ ಎಂದು ಜೈರಾಮ್ ರಮೇಶ್ ತಮ್ಮ ಖಾತೆಯಲ್ಲಿ ಬರೆದುಕೊಂಡು ನವೆಂಬರ್-30ರ ಭಾನುವಾರ ಪೋಸ್ಟ್ ಮಾಡಿದ್ದಾರೆ.

