ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ತಾಲೂಕಿನಾದ್ಯಂತ ಸರ್ಕಾರಿ ಜಾಗ ಕಬಳಿಸುವುದು, ಸರ್ಕಾರಿ ಜಾಗದಲ್ಲಿ ಮಣ್ಣು ಸಾಗಿಸುವುದು ಸಲೀಸಿನ ಕೆಲಸ ಎಂಬಂತಾಗಿದೆ. ಹಿರಿಯೂರು ತಾಲೂಕಿನಲ್ಲಿ ತಹಶೀಲ್ದಾರ್ ನೋಟಿಸ್ ಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಗೋಮಾಳ, ರುದ್ರಭೂಮಿ, ಅರಣ್ಯ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿರುವ ಹತ್ತಾರು ಉದಾಹರಣೆಗಳು ತಾಲೂಕಿನಲ್ಲಿದ್ದು ಇದೀಗ ಬಿದರಕೆರೆ ಗ್ರಾಮದ ರಿಸನಂ 1ರ ಹುಲ್ಲುಬನ್ನಿ ಖರಾಬಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಕಳೆದ ಎರಡು ತಿಂಗಳ ಹಿಂದೆ ದಿನಾಂಕ 28-8-2025 ರಂದು ಅಕ್ರಮ ಶೆಡ್ ನಿರ್ಮಾಣ ಮಾಡಿಕೊಳ್ಳುತ್ತಿರುವವರಿಗೆ ತಹಶೀಲ್ದಾರ್ ಕಚೇರಿಯಿಂದ ಒಂದು ನೋಟಿಸ್ ಜಾರಿಯಾಗುತ್ತದೆ. ಮೂರು ದಿನದೊಳಗೆ ಅಕ್ರಮ ಶೆಡ್ ತೆರವು ಮಾಡಿಕೊಳ್ಳದಿದ್ದರೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ನಿಯಮ 192 ಎ ರಡಿಯಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ನೋಟಿಸ್ ನೀಡುತ್ತಾರೆ.
ಅದಾಗಿ 60 ದಿನ ಕಳೆದರೂ ತಹಶೀಲ್ದಾರ್ ನೋಟಿಸ್ ಗೆ ಅನಧಿಕೃತ ಶೆಡ್ ನಿರ್ಮಾಣದಾರರು ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಅಕ್ರಮವಾಗಿ ನಿಲ್ಲಿಸಿದ್ದ ಒಂದು ಗೂಟವನ್ನು ಸಹ ಅಲ್ಲಾಡಿಸಲಾಗಲಿಲ್ಲ. ಮತ್ತೆ ತಹಶೀಲ್ದಾರ್ ಕಚೇರಿಯಿಂದ 3-11-2025 ರಂದು ಮತ್ತೊಂದು ನೋಟಿಸ್ ಜಾರಿಯಾಗುತ್ತದೆ. ಅದರಲ್ಲೂ ಮೂರು ದಿನದೊಳಗೆ ತೆರವುಗೊಳಿಸಿ ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಸಲಾಗುತ್ತದೆ. ಆ ನೋಟಿಸ್ ಗೂ ಅನಧಿಕೃತ ಶೆಡ್ ನವರು ಕ್ಯಾರೆ ಎನ್ನದೆ ಶೆಡ್ ನಿರ್ಮಾಣ ಕಾರ್ಯ ಮುಂದುವರೆಸುತ್ತಾರೆ.
ಮತ್ತೆ ದಿನಾಂಕ 28-11-2025 ರಂದು ಸ್ಥಳಕ್ಕೆ ಭೇಟಿ ನೀಡಿದ ರಾಜಸ್ವ ನಿರೀಕ್ಷಕರು ಶೆಡ್ ತೆರವಿಗೆ ಮತ್ತೆ ಸಮಯ ನೀಡುತ್ತಾರೆ.
ಸರ್ಕಾರಿ ಭೂಮಿ ಉಳಿಸುವ ಮನಸು ಇಲ್ಲದ ಅಧಿಕಾರಿಗಳಿಂದ ಸರ್ಕಾರಿ ಜಾಗಗಳು ಉಳ್ಳವರ ಪಾಲಾಗುತ್ತಿವೆ.
ಧರ್ಮಪುರ ಹೋಬಳಿಯ ರಂಗೇನಹಳ್ಳಿ ರುದ್ರಭೂಮಿಯನ್ನು ರಾಕ್ಷಸರಂತೆ ಬಗೆದು ಮಣ್ಣು ಸಾಗಿಸಿದ್ದರು ಸಹ ಇಲ್ಲಿನ ರಾಜಸ್ವ ನೀರಿಕ್ಷಕರಿಗೆ ಅದು ಕಾಣುವುದಿಲ್ಲ. ಕಂಡರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮೂರು ತಿಂಗಳುಗಳ ಕಾಲ ಅಕ್ರಮ ಶೆಡ್ ನಿರ್ಮಾಣದ ಮಾಹಿತಿ ಅವರ ಗಮನದಲ್ಲಿದ್ದರು ಸಹ ಅವುಗಳನ್ನು ತೆರವು ಮಾಡುವ ಮನಸು ಮಾಡುವುದಿಲ್ಲ.
ಸರ್ಕಾರಿ ಭೂಮಿ ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ನಿರ್ಲಕ್ಷವಹಿಸಿ ಕರ್ತವ್ಯ ಲೋಪ ಎಸಗುತ್ತಾ ಬರಲಾಗಿದೆ.
ಅಕ್ರಮ ಮಣ್ಣು ಸಾಗಣೆದಾರರ ಮೇಲೆ ಕ್ರಮ ಕೈಗೊಳ್ಳಲಿಲ್ಲ, ಅಕ್ರಮ ಶೆಡ್ ತೆರವು ಮಾಡಲಿಲ್ಲ ಎಂದು ಧರ್ಮಪುರ ರಾಜಸ್ವ ನಿರೀಕ್ಷಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೆಲವು ಸಂಘಟನೆಗಳ ಮುಖಂಡರು ಲಿಖಿತ ರೂಪದಲ್ಲಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು ಸಹ ಯಾವುದೇ ಕ್ರಮ ಇಲ್ಲಿಯವರೆಗೂ ಜಾರಿಯಾಗಿಲ್ಲ. ಅಕ್ರಮ ಶೆಡ್ ದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.
“ಧರ್ಮಪುರ ಹೋಬಳಿಗೆ ರಾಜಸ್ವ ನಿರೀಕ್ಷಕ ವರದರಾಜ್ ರವರು ಬಂದು ಮೂರು ವರ್ಷದ ಮೇಲಾಗಿದೆ. ಇಕ್ಕನೂರು ವಿಎ ಆಗಿದ್ದ ಅವರನ್ನು ಹಿರಿತನದ ಆಧಾರದ ಮೇಲೆ ರಾಜಸ್ವ ನಿರೀಕ್ಷಕರಾಗಿ ಇನ್ ಚಾರ್ಜ್ ಕೊಟ್ಟು ನೇಮಿಸಲಾಗಿದೆ.
ಆದರೆ ಅವರ ಅಧಿಕಾರದ ಅವಧಿಯಲ್ಲಿಯೇ ಸಾಕಷ್ಟು ಗೋಮಾಳದ ಮಣ್ಣು ಖಾಲಿಯಾಗಿರುವುದನ್ನು ಜನರು ನೋಡಿದ್ದಾರೆ. ಈ ಹೋಬಳಿ ವ್ಯಾಪ್ತಿಯ ರಂಗೇನಹಳ್ಳಿ ರುದ್ರಭೂಮಿ, ಗೋಮಾಳ, ಬಿದರಕೆರೆ ಶಿವಗಂಗಾ ಮದ್ಯದ ಸರ್ಕಾರಿ ಗೋಮಾಳದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಿರಂತರವಾಗಿ ಮಣ್ಣು ಎತ್ತಲಾಗಿದೆ. ಇವತ್ತಿಗೂ ಆ ಸರ್ಕಾರಿ ನೆಲಗಳು ಮೈ ತುಂಬಾ ಮಣ್ಣುಗಳ್ಳರು ಮಾಡಿ ಹೋದ ಗಾಯದಿಂದ ನರಳುತ್ತಿವೆ. ಇದಕ್ಕೆಲ್ಲಾ ಕೊನೆ ಇಲ್ಲವಾ? ಸರ್ಕಾರಿ ಆದೇಶಗಳಿಗೆ ಬೆಲೆ ಇಲ್ಲವಾ?”.
“ಬಿದರಕೆರೆ ಗ್ರಾಮದ ರಿಸನಂ 1 ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಶೆಡ್ ನಿರ್ಮಾಣ ಮಾಡುವವರ ವಿರುದ್ಧ ತಾಲೂಕು ಆಡಳಿತ ಎರಡು ಬಾರಿ ನೋಟಿಸ್ ನೀಡಿದ್ದರು ಸಹ ತಹಸೀಲ್ದಾರ್ ನೋಟಿಸ್ ಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಅಕ್ರಮವಾಗಿ ಶೆಡ್ ಗಳನ್ನ ನಿರ್ಮಾಣ ಮಾಡುತ್ತಿರುವುದು ನೋಡಿದರೆ ಕಾನೂನಿಗೆ ತಾಲೂಕಿನಲ್ಲಿ ಬೆಲೆ ಇಲ್ಲದಂತಾಗಿದೆ ಎನ್ನಬಹುದು.ಧರ್ಮಪುರ ಹೋಬಳಿಯ ಬಿದರಕೆರೆ ಗ್ರಾಮದಲ್ಲಿ ಅಕ್ರಮ ಶೆಡ್ ನಿರ್ಮಾಣ, ರಂಗೇನಹಳ್ಳಿ ರುದ್ರಭೂಮಿಯಲ್ಲಿ ಅಕ್ರಮ ಮಣ್ಣು ಸಾಗಣೆ, ಕಸಬಾ ಹೋಬಳಿಯ ದೊಡ್ಡಗಟ್ಟ ಗ್ರಾಮದ ಬಳಿ ಗೋಮಾಳದಲ್ಲಿ ಅಕ್ರಮ ಮಣ್ಣು ಸಾಗಾಟ ಹೀಗೆ ನಿರಂತರ ಅಕ್ರಮಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ನಡೆ ಖಂಡನೀಯವಾದುದು”.
ಕೆಪಿ ಶ್ರೀನಿವಾಸ್, ರಾಜ್ಯ ಕಾರ್ಯಾಧ್ಯಕ್ಷ, ಮಹಾನಾಯಕ ದಲಿತ ಸೇನೆ.

