ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಕಬ್ಬು, ಮೆಕ್ಕೆಜೋಳ ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣಗೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಇದ್ದೂ ಇಲ್ಲದಂತಿದೆ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ರಾಜ್ಯದಲ್ಲಿ ಜನ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ರೈತರು, ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಾರ್ಮಿಕರುಮ ಸಮಸ್ಯೆ ನಿತ್ಯ ಬೆಳೆಯುತ್ತಿವೆ.ಆದರೆ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಜನ ವಿರೋಧಿ, ಅಭಿವೃದ್ಧಿ ವಿರೋಧಿ, ರೋಗಗ್ರಸ್ತ ಸರ್ಕಾರ ಇದಾಗಿದ್ದು ಚಿಕಿತ್ಸೆ ನೀಡಿದರೂ ಇದು ವಾಸಿ ಆಗುವುದಿಲ್ಲ, ಏಕೆಂದರೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ವಯಸ್ಸಾಗಿದೆ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಬದುಕುವುದು ಕಷ್ಟವಾಗಿದೆ, ಹಾಗಾಗಿ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.
ಬರೀ ಗ್ಯಾರಂಟಿ ಹೆಸರೇಳಿಕೊಂಡು ಓಡಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಎರಡೂವರೆ ವರ್ಷ ಆಯ್ತು ಎನ್ನುತ್ತಿದ್ದಾರೆ. ಐದು ಗ್ಯಾರಂಟಿ ತೋರಿಸಿಕೊಂಡು ಓಡಾಡುತ್ತಿದ್ದಾರೆ. ದಲಿತರಿಗೆ ಗ್ಯಾರಂಟಿಗಳು ಉಚಿತವಲ್ಲ, ಉಳಿದವರಿಗೆ ಉಚಿತ, ಈ ಬಗ್ಗೆ ದಲಿತ ಸಂಘಟನೆಗಳು ಬಾಯಿ ಬಿಡುತ್ತಿಲ್ಲ, ಪ್ಯಾಕೇಜ್ ಸಂಘಟನೆಗಳಾಗಿವೆ. ಹಾಗಾಗಿ ಹೋರಾಟ ಮಾಡುತ್ತಿಲ್ಲ, ದಲಿತರಿಗೆ ಮೀಸಲಿಟ್ಟಿದ್ದ ಎಸ್ಸಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿಗೆ ಬಳಕೆ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಪಿ, ಟಿಎಸ್ಪಿ ಕಾಯ್ದೆ ತಂದಿದ್ದೇ ನಾವು ಎಂದು ಭಾಷಣ ಮಾಡುತ್ತಾರೆ. ಖಂಡಿತ ಅವರೇ ಕಾಯ್ದೆ ತಂದಿದ್ದು ಆದರೆ ಎಸ್ಸಿಪಿ, ಟಿಎಸ್ಪಿ ಅನುದಾನ ನುಂಗಿದ್ದು ಕಾಂಗ್ರೆಸ್ಸಿನವರೇ ಎಂದು ಅವರು ಆರೋಪಿಸಿ ಬಜೆಟ್ ನಲ್ಲಿ ಶೇ.24 ರಷ್ಟು ನಿಗದಿ ಮಾಡಿ ಕಾಯ್ದೆ ಮಾಡಿ ತಿಂದಿದ್ದೂ ಕಾಂಗ್ರೆಸ್ಸು ಎಂದು ಛಲವಾದಿ ನಾರಾಯಣಸ್ವಾಮಿ ಟೀಕಾಪ್ರಹಾರ ಮಾಡಿದರು.
ದಲಿತರು, ಶೋಷಿತರು, ಬಡವರಿಗಾಗಿರುವ ಗಂಗಾ ಕಲ್ಯಾಣ, ಜಮೀನುಖರೀದಿ ಸೇರಿದಂತೆ ಇತರೆ ಯೋಜನೆಗಳಿಗೆ ಬಿಡಿ ಕಾಸು ನೀಡಿಲ್ಲ. ಅಲ್ಪ ಸಂಖ್ಯಾತರು, ದಲಿತರಿಗೆ ಏನುಕೊಟ್ಟಿಲ್ಲ. ಇವರನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮಗೆ ಉಳಿಗಾಲ ಇಲ್ಲ ಎಂದು ಅಲ್ಪ ಸಂಖ್ಯಾತರಿಗೆ ಹೆದರಿಸುವುದು, ಬಿಜೆಪಿ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ದಲಿತರಿಗೆ ಹೆದರಿಸಿ ಮತ ಹಾಕಿಸಿಕೊಂಡು ಕೈ ಬಿಡುತ್ತಾರೆ. ಸಂವಿಧಾನ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ಸಿಗರೇ ಭಕ್ಷಕರು. ತುರ್ತು ಪರುಸ್ಥಿತಿ ಹೇರಿದ್ದು ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ. ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಯಾರು ಕತ್ತಲಲ್ಲಿಟ್ಟಿದ್ದರು ಎನ್ನುವುದನ್ನು ಮುಸ್ಲಿಂರು, ದಲಿತರು ಸೇರಿದಂತೆ ಇತರೆ ಒಬಿಸಿ ವರ್ಗಗಳು ತಿಳಿಯಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಕರೆ ನೀಡಿದರು.
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗಬೇಕು. ಕಾಂಗ್ರೆಸ್ ಇದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ, ದಲಿತರು, ಮುಸ್ಲಿಮರಿಗೆ ಭಾರೀ ಅನ್ಯಾಯ ಆಗುತ್ತಿರುವುದು ಈ ಕಾಂಗ್ರೆಸ್ ನಿಂದ, ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮ ಆಗಬೇಕು ಎಂದು ಅವರು ಕರೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ವಿಪಕ್ಷಗಳು ಕಾಂಗ್ರೆಸ್ ನಾಶ ಮಾಡಬೇಕಿಲ್ಲ, ಅಲ್ಲಿಯವರೇ ಕಾಂಗ್ರೆಸ್ ನಾಶ ಮಾಡುತ್ತಾರೆ. ಪರಿಶಿಷ್ಟ ಜಾತಿಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕೊಟ್ಟು ಅವರಿಗೆ ಅಪಮಾನ ಮಾಡುತ್ತಾರೆ ಎನ್ನುವ ಆತಂಕ ಇದೆ. ರಾಹುಲ್ ಗಾಂಧಿಯೇ ಕೊನೆ ಮೊಳೆ ಹೊಡೆಯುತ್ತಾರೆ. ಆದರೆ ಕೊನೆ ಮೊಳೆ ಹೊಡೆಯುವ ಕಳಂಕವನ್ನು ಖರ್ಗೆ ಅವರಿಗೆ ತರುತ್ತಾರೆ ಎನ್ನುವ ಆತಂಕ ನನಗಿದೆ ಎಂದು ಅವರು ದೂರಿದರು. ಬ್ರೇಕ್ ಫಾಸ್ಟ್ ನಲ್ಲಿ ಎಲ್ಲವೂ ಮುಗಿದು ಹೋಯಿತು.ಹಾಳಾಗಿರುವ ಸಂಬಂಧ ಬ್ರೇಕ್ ಫಾಸ್ಟ್ ನಿಂದ ಸರಿಯಾಗುತ್ತದಾ. ಇದು ಸಿನೆಮಾದಲ್ಲಿ ದಿಢೀರ್ ಆಗಿ ಮಧ್ಯದಲ್ಲಿ ಬರುವ ಇಂಟರ್ ವೆಲ್(ವಿರಾಮ) ಮಾತ್ರ. ಅಂದರೆ ಸಿನೆಮಾ ಇನ್ನೂ ಅರ್ಧ ಇದೆ ಎಂದರ್ಥ ಎಂದು ಅವರು ವ್ಯಂಗ್ಯವಾಡಿದರು.
ದಲಿತ ಸಮುದಾಯಗಳು ಧ್ವನಿ ಇಲ್ಲದಂತಾಗಿದೆ. ಸಿದ್ದರಾಮಯ್ಯ ಪರ ಕೆಲ ನಾಯಕರು ಧ್ವನಿ ಎತ್ತಿದ್ದಾರೆ. ಡಿಕೆಶಿವಕುಮಾರ್ ಕೂಲಿ ಕೇಳುವ ಮೂಲಕ ಹಕ್ಕು ಮಂಡನೆ ಮಾಡುತ್ತಿದ್ದಾರೆ. ಆದರೆ ಧ್ವನಿ ಇಲ್ಲದ ದಲಿತ ನಾಯಕರು ಸಿಎಂ ಹುದ್ದೆಗಾಗಿ ಹಕ್ಕು ಮಂಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೂವರೆಗೂ ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಅಂದುಕೊಂಡಿದ್ದರು. ಆದರೆ, ಖರ್ಗೆ ಅವರೇ ಹೈಕಮಾಂಡ್ ಗೆ ಹೇಳುತ್ತೇನೆ ಎಂದರೆ, ಯಾರು ಹೈ ಕಮಾಂಡ್, ಇಟಲಿಯಾ, ಪಾಕಿಸ್ತಾನವಾ ಅಥವಾ ಒಂದು ಕುಟುಂಬವಾ ಎಂದು ಛಲವಾದಿ ನಾರಾಯಣಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದರು.
ಕಾಂಗ್ರೆಸ್ಸಿನವರು ನಾಲ್ಕೈದು ದಲಿತ ಕುಟುಂಬಗಳನ್ನು ತೋರಿಸಿಕೊಂಡು ದಲಿತರು ಕಾಂಗ್ರೆಸ್ ಪರ ಎಂದು ತೋರಿಸುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ದಲಿತ ಮುಖ್ಯಮಂತ್ರಿ ಆಗುವುದು ಸಾಧ್ಯವೇ ಇಲ್ಲ. ದಲಿತರಲ್ಲಿ ಒಗ್ಗಟ್ಟೇ ಇಲ್ಲ. ಖರ್ಗೆ ಇರುವವರೆಗೆ ಯಾರೊಬ್ಬ ದಲಿತರು ಸಿಎಂ ಆಗಲ್ಲ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕು ಇಲ್ಲ ಎಂದರೆ ಅವರ ಮಗ ಸಿಎಂ ಆಗಬೇಕು. ಪರಮೇಶ್ವರ್ ಆಗಲಿ, ಕೆ.ಹೆಚ್ ಮುನಿಯಪ್ಪರಾಗಲಿ ಬೇರೆ ಯಾರನ್ನೂ ಸಿಎಂ ಆಗಲು ಬಿಡುವುದಿಲ್ಲ ಎಂದು ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ಲೋಕೇಶ್, ನಾಗರಾಜ್, ಭಾರ್ಗವಿ ದ್ರಾವಿಡ್, ತಿಪ್ಪೇಸ್ವಾಮಿ, ಲಿಂಗರಾಜು, ನಾಗರಾಜ್ ಬೇದ್ರೆ ಮತ್ತಿತರರು ಸುದ್ದಿಗೋಷ್ಟಿಯಲ್ಲಿದ್ದರು.

