ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರು ಕೃಷಿ ಜೊತೆ ಜೊತೆಯಲ್ಲೇ ಉಪಕಸುಬಾಗಿ ಸಾಕಷ್ಟು ಲಾಭ ತರುವ ಕುಕ್ಕಟ ಉದ್ಯಮ ಆರಂಭಿಸಲು ಮತ್ತು ಕೋಳಿ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆ ಕುರಿತು ಖ್ಯಾತ ಪಶುವೈದ್ಯರಾದ ಡಾ.ನರಹರಿ ಅವರು ರೈತರಿಗಾಗಿ ಉತ್ತಮ ಲೇಖನ ಬರೆದಿದ್ದು ರೈತರು ಸದುಪಯೋಗ ಮಾಡಿಕೊಳ್ಳಬೇಕಿದೆ.
ಏನಿದು ಕುಕ್ಕಟ ಉದ್ಯಮ-
ಕುಕ್ಕುಟ ಉದ್ಯಮವು ಕೋಳಿ ಸಾಕಾಣಿಕೆ, ಮಾಂಸ ಮತ್ತು ಮೊಟ್ಟೆ ಉತ್ಪಾದನೆ ಹಾಗೂ ಮಾರಾಟ ಪ್ರಕ್ರಿಯೆಯನ್ನು ಒಳಗೊಂಡಿದೆ. ಉಪ ಕಸುಬು ರೀತಿಯಲ್ಲಿ ಈ ಉದ್ಯಮ ಮಾಡುವಂತ ರೈತರಿಗೆ ಹೆಚ್ಚಿನ ಆದಾಯ ಒದಗಿಸುತ್ತದೆ. ಮತ್ತು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತದಂತಹ ಸಂಸ್ಥೆಗಳ ಮೂಲಕ ಸಹಾಯಧನ ಮತ್ತು ತರಬೇತಿ ನೀಡಲಾಗುತ್ತದೆ.
ಆದರೆ, ಆಹಾರ ಧಾನ್ಯಗಳ ಬೆಲೆ ಏರಿಕೆ, ಶೈತ್ಯಾಗಾರಗಳ ಕೊರತೆ ಮತ್ತು ಹಕ್ಕಿ ಜ್ವರದಂತಹ ಸವಾಲುಗಳನ್ನು ರೈತರು ಎದುರಿಸಲು ಸಿದ್ಧರಿರಬೇಕು. ಆದರೂ ಈ ಉದ್ಯಮ ನಷ್ಟ ತರುವುದಿಲ್ಲ.
ಮುಖ್ಯ ಅಂಶಗಳು:
ಕೋಳಿ ಸಾಕಾಣಿಕೆ: ಕೋಳಿಗಳನ್ನು ಮಾಂಸಕ್ಕಾಗಿ ಅಥವಾ ಮೊಟ್ಟೆಗಾಗಿ ಸಾಕಲಾಗುತ್ತದೆ.
ಮಾರಾಟ: ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಅಗತ್ಯ ಸಾಲ ಸೌಲಭ್ಯ ಹಾಗೂ ಸಹಾಯಧನ ಲಭ್ಯವಿದೆ.
ಉತ್ಪಾದನೆ: ಕುಕ್ಕುಟ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಹೆಚ್ಚು ತೂಕವಿರುವ ಮಾಂಸದ ಕೋಳಿಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ, ಇದು ಮಾಂಸ ಉತ್ಪಾದನೆ ಹೆಚ್ಚಿಸಲು ಅನುವು ಮಾಡಿದೆ.

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ:
ಕೋಳಿ ಸಾಕಾಣಿಕೆಯಲ್ಲಿ ತೊಡಗುವಂತಹ ರೈತಾಪಿ ವರ್ಗದವರಿಗೆ ಈ ಸಂಸ್ಥೆಯು ಕುಕ್ಕುಟ ಉದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ನೀಡುತ್ತದೆ. ಉದಾಹರಣೆಗೆ ಸಹಾಯಧನ, ತರಬೇತಿ ಕಾರ್ಯಕ್ರಮಗಳು, ಇತ್ಯಾದಿ. ಅಲ್ಲದೆ ಬಿ.ವಿ. 380 ಮೊಟ್ಟೆ ಕೋಳಿ ಘಟಕ ಸ್ಥಾಪಿಸಲು ಸಹಾಯಧನ ಲಭ್ಯವಿದೆ. ತರಬೇತಿ: ರೈತರಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿ ನೀಡಲಾಗುತ್ತದೆ.
ರಾಷ್ಟ್ರೀಯ ಆರ್ಥಿಕತೆ:
ಸುಭದ್ರ ರಾಷ್ಟ್ರೀಯ ಆರ್ಥಿಕತೆಯನ್ನು ಮತ್ತು ಸುಸ್ಥಿರ ಕುಕ್ಕುಟೋದ್ಯಮ ನಿರ್ಮಿಸುವಲ್ಲಿ ಕುಕ್ಕುಟ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆ ಪಾತ್ರ ಮುಖ್ಯವಾಗಿದೆ. ಕುಕ್ಕುಟ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆಯು ಸಮರ್ಥನೀಯ ಕುಕ್ಕುಟ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಪ್ರಮುಖ ಹಾಗೂ ನಿರ್ಣಾಯಕ ಪಾತ್ರವಹಿಸುತ್ತದೆ.
ಈ ಲೇಖನವು ಕುಕ್ಕುಟ ಮಾಂಸ ಮತ್ತು ಮೊಟ್ಟೆ ಪೂರೈಕೆ, ಬೇಡಿಕೆಯ ಹಾಗು ಸಂಸ್ಕರಣಾ ವಿಧಾನಗಳ ನಡುವಿನ ಅವಲಂಬಿತ ಸಂಬಂಧವನ್ನು ಒತ್ತಿಹೇಳುತ್ತದೆ.
ಈ ಲೇಖನದಲ್ಲಿ ಪರಿಣಾಮಕಾರಿ ಸಂಸ್ಕರಣಾ ವಿಧಾನಗಳು ಹೇಗೆ ಗ್ರಾಹಕರ ವಿವಿಧ ಬೇಡಿಕೆಗಳನ್ನು ಪೂರೈಸುತ್ತವೆ ಮತ್ತು ಅನೇಕ ಮಾರ್ಗಗಳ ಮೂಲಕ ಆರ್ಥಿಕ ವಿಸ್ತರಣೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಲಾಗಿದೆ.
ಕುಕ್ಕುಟ ಮಾಂಸ ಮತ್ತು ಮೊಟ್ಟೆ ಸಂಸ್ಕರಣಾ ಘಟಕಗಳ ಹೆಚ್ಚಳವು ಉದ್ಯೋಗಾವಕಾಶಗಳ ಸೃಷ್ಟಿಗೆ ಸಹಾಯವಾಗುತ್ತದೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆಯು ಹೆಚ್ಚಾಗುತ್ತದೆ. ಈ ಸವಲತ್ತುಗಳು ಮನೆಯ ಗಳಿಕೆಯನ್ನು ಹೆಚ್ಚಿಸುತ್ತವೆ ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ.
ಒಟ್ಟಾಗಿ, ಕುಕ್ಕುಟ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆಯು ಕೋಳಿ ಕ್ಷೇತ್ರ ಮತ್ತು ರಾಷ್ಟ್ರೀಯ ಆರ್ಥಿಕತೆಯನ್ನು ಬೆಂಬಲಿಸುವ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿತಿಸ್ಥಾಪನೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಭಾರತವು ವೈವಿಧ್ಯಮಯ ಹಾಗು ವಿಭಿನ್ನ ಮಾರುಕಟ್ಟೆ ರಚನೆಗಳು ಹಾಗೂ ಅಭಿವೃದ್ಧಿ ಹೊಂದುತ್ತಿರುವ ನಿಯಂತ್ರಣ ರೂಪರೇಖೆಗಳನ್ನು ಕೂಡಿದ ಪರಿಸರವನ್ನು ಹೊಂದಿದೆ.
ಈ ಕ್ಷೇತ್ರ ಹಲವಾರು ವರ್ಷಗಳಿಂದ ನಿರಂತರವಾಗಿ ವಿಸ್ತಾರಗೊಂಡಿದ್ದರೂ, ಇದರ ರಚನೆ ಸಂಕೀರ್ಣವಾಗಿದೆ. ಇಲ್ಲಿ ಭಾರಿ ಏಕೀಕೃತ ಕಾರ್ಯಾಚರಣೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಸಹ ಸೇರಿಕೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 92 ಕುಕ್ಕುಟ ಸಂಸ್ಕರಣಾ ಘಟಕಗಳು ಪ್ರಚಲಿತದಲ್ಲಿವೆ, ಮತ್ತು 2025ರ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಘಟಕಗಳು ಕಾರ್ಯನಿರ್ವಹಣೆಗೆ ಬರಲಿವೆ ಎಂಬ ನಿರೀಕ್ಷೆಯಿದೆ. ಈ ಘಟಕಗಳು 1000 BPH (ಪ್ರತೀ ಗಂಟೆಗೆ ಸಂಸ್ಕರಿಸುವ ಸಂಖ್ಯೆ) ಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆ.
ಈ ಸೌಲಭ್ಯಗಳು ಸರಾಸರಿ 2711 BPH ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ, ಸುಮಾರು 120 ಕುಕ್ಕುಟ ಸಂಸ್ಕರಣಾ ಘಟಕಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಅವು 1000 ಹಕ್ಕಿಗಳು ಪ್ರತಿ ಘಂಟೆಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿವೆ (APTEC 2025). ಭಾರತದ ಕುಕ್ಕುಟ ಸಂಸ್ಕರಣಾ ಉದ್ಯಮದ ತಕ್ಷಣದ (ರಿಯಲ್-ಟೈಮ್) ಸಾಮರ್ಥ್ಯವು, ದೊಡ್ಡ ಕಂಪನಿಗಳನ್ನು ಸಣ್ಣ ವ್ಯವಹಾರಗಳೊಂದಿಗೆ ಸಂಯೋಜಿಸುವ ವೈವಿಧ್ಯಮಯ ಸಂಯೋಜನೆಯ ಮೂಲಕ, ಆರ್ಥಿಕ ಬೆಳವಣಿಗೆಗೆ ಮಹತ್ವಪೂರ್ಣವಾಗಿ ಸಹಾಯಮಾಡುತ್ತಿದೆ. ಇದು ದೀರ್ಘಕಾಲಿಕ ಶಾಶ್ವತ ಬೆಳವಣಿಗೆಯೊಂದಿಗೆ ರಾಷ್ಟ್ರದ್ಯಂತ ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವ ಬಲಿಷ್ಠ ಪರಿಸರವನ್ನು ರೂಪಿಸುತ್ತಿದೆ.
ಭಾರತ ಕುಕ್ಕುಟೋದ್ಯಮದ ಐತಿಹಾಸಿಕ ಮಹತ್ವ:
ಭಾರತದಲ್ಲಿ ಕುಕ್ಕುಟ ಸಂಸ್ಕರಣೆಯ ಇತಿಹಾಸವು ಸಾಂಪ್ರದಾಯಿಕ ಪದ್ಧತಿಗಳಿಂದ ಆಧುನೀಕೃತ, ತಾಂತ್ರಿಕವಾಗಿ ಮುಂದುವರಿದ ವಿಧಾನಗಳಿಗೆ ಪರಿವರ್ತನೆಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಭಾರತ ದೇಶದಲ್ಲಿ 20ನೇ ಶತಮಾನದ ಮಧ್ಯದವರೆಗೆ ಕುಕ್ಕುಟ ಉತ್ಪಾದನೆ ಮತ್ತು ಸಂಸ್ಕರಣೆ ಬಹುಪಾಲು ಸ್ಥಳೀಯವಾಗಿ ನಡೆಯುತ್ತಿತ್ತು. ಸ್ಥಳೀಯ ಮಾರುಕಟ್ಟೆಗಳಿಗೆ ಸಣ್ಣ ಪ್ರಮಾಣದ ಹಿತ್ತಲಿನ ಕುಕ್ಕುಟ ರೈತರು ಕೋಳಿಗಳನ್ನು ಪೂರೈಸುತ್ತಿದ್ದರು. ಇದರ ನಂತರದ ದಿನಗಳಲ್ಲಿ ಗ್ರಾಹಕರ ಬೇಡಿಕೆಗಳು ಪ್ರೋಟೀನ್-ಭರಿತ ಆಹಾರ ಹಾಗು ಗುಣಮಟ್ಟದ ಮಾಂಸದ ಕಡೆಗೆ ತಿರುಗಿತು.
ಈ ಬೆಳವಣಿಗೆಗಳು ಸಂಸ್ಕರಿಸಿದ ಕೋಳಿ ಉತ್ಪನ್ನಗಳಿಗೆ ಬೇಡಿಕೆಯಲ್ಲಿ ಏರಿಕೆಗೆ ಕಾರಣವಾದವು. ಐತಿಹಾಸಿಕ ದತ್ತಾಂಶದ ಪ್ರಕಾರ 2000ರಲ್ಲಿ, ಮೊಟ್ಟೆ ಉತ್ಪಾದನೆಯು ಸರಿಸುಮಾರು 37 ಶತಕೋಟಿ ಇದ್ದು, 2022 ರಲ್ಲಿ ಅದು 130 ಶತಕೋಟಿಗೆ ಏರಿತು. ಇದೆ ರೀತಿ ಕುಕ್ಕುಟ ಉತ್ಪಾದನೆಯು 2000 ರಲ್ಲಿ 0.4 ಮೆಟ್ರಿಕ್ ಟನ್ ಇತ್ತು, ಈ ಉತ್ಪಾದನೆಯು ಬೆಳೆಯುತ್ತ 2022-23 ರಲ್ಲಿ 4.2 ಮೆಟ್ರಿಕ್ ಟನ್ ಗೆ ವಿಸ್ತರಿಸಿತು (World bank 2022-2023).
ಈ ಗಣನೀಯ ಉತ್ಪಾದನಾ ಏರಿಕೆಗೆ ತಾಂತ್ರಿಕ ಪ್ರಗತಿಗಳು ಮತ್ತು ಕುಕ್ಕುಟ ಸಂಸ್ಕರಣಾ ಉದ್ಯಮದಲ್ಲಿನ ಸುಧಾರಿತ ಉತ್ಪಾದನಾ ವಿಧಾನಗಳು ಮುಖ್ಯ ಕಾರಣವಾದವು. ಇದರ ಜೊತೆ ಕೋಲ್ಡ್ ಚೈನ್ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ಗಳಲ್ಲಿ ನಡೆದ ಹೂಡಿಕೆಗಳು ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿದವು. ಈ ಮೂಲಕ ದೇಶದಾದ್ಯಾಂತ ವಿವಿಧ ಗ್ರಾಹಕ ವಿಭಾಗಗಳಿಗೆ ಈ ಕ್ಷೇತ್ರವು ಸೇವೆ ನೀಡಲು ಸಾಧ್ಯವಾಯಿತು.
ನಿಖರವಾಗಿ 2000ರಿಂದ, ಮೊಟ್ಟೆಗಳ ಉತ್ಪಾದನೆಯು ವಾರ್ಷಿಕವಾಗಿ 5.9% ದರದಲ್ಲಿ ವೃದ್ಧಿಯಾಗುತ್ತಿದೆ, ಮತ್ತು ಕುಕ್ಕುಟ ಮಾಂಸದ ಉತ್ಪಾದನೆಯು 11.3% ದರದಲ್ಲಿ ಹೆಚ್ಚುತ್ತಿದೆ (World bank 2022-2023). ಅಲ್ಲದೆ ಪ್ರತಿ ವ್ಯಕ್ತಿ ಕುಕ್ಕುಟ ಮಾಂಸದ ಸೇವನೆಯು 2022 ರಲ್ಲಿ 5.3 ಕೆಜಿಯಿಂದ ಇದೆ. ಈ ಸೇವನೆಯು 2030 ರ ಹೊತ್ತಿಗೆ 9.1 ಕೆಜಿಗೆ ಏರುವ ನಿರೀಕ್ಷೆಯಿದೆ (Department of Animal Husbandry 2022). ಒಟ್ಟಾರೆ ಈ ಪ್ರಮುಖ ಅಂಕಿಅಂಶಗಳು ಕುಕ್ಕುಟ ಉದ್ಯಮದ ಗಣನೀಯ ವಿಸ್ತರಣೆಯನ್ನು ಒತ್ತಿ ಒತ್ತಿ ಹೇಳುತ್ತವೆ. ಪ್ರಸ್ತುತ, ದೇಶದಾದ್ಯಾಂತ ಸುಮಾರು 92 ಕುಕ್ಕುಟ ಸಂಸ್ಕರಣೆ ಘಟಕಗಳು ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುತ್ತಿವೆ. ಈ ಎಲ್ಲ ಅಂಕಿಅಂಶಗಳು ಭಾರತ ದೇಶದ ಕುಕ್ಕುಟ ಉದ್ಯಮದ ವ್ಯಾಪಾರ ಮತ್ತು ಬೆಳವಣಿಗೆಯ ಇತಿಹಾಸವನ್ನು ಹಾಗೂ ಅದರ ಆರ್ಥಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ.
ಲೇಖನ: ಡಾ.ಆರ್.ನರಹರಿ, ಬಿದರೆಕೆರೆ, ಹಿರಿಯೂರು ತಾಲೂಕು, ಚಿತ್ರದುರ್ಗ.
ಲೇಖನ ಮುಂದುವರೆಯಲಿ…

