ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಟಿ? ಎಲ್ಲಿದೆ ನೇಮಕಾತಿ ಭಾಗ್ಯ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ.
ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಲಕ್ಷಾಂತರ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ‘ಧಾರವಾಡ ಚಲೋ’ ಮೂಲಕ ವಿದ್ಯಾರ್ಥಿಗಳ ನಡೆಸುತ್ತಿರುವ ನ್ಯಾಯಯುತ ಬೃಹತ್ ಪ್ರತಿಭಟನೆಯ ಹಿಂದಿನ ತಮ್ಮ ವೈಫಲ್ಯ, ಯುವಜನರ ನೋವು, ಹತಾಶೆಗಳನ್ನು ಗಮನಿಸದೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಲ ಪ್ರಯೋಗದಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.
ಕಷ್ಟಪಟ್ಟು ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವ ನಮ್ಮ ಯುವಜನರ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಉಪಯೋಗಿಸಿರುವುದು ಹೇಯ ಕೃತ್ಯ ಎಂದು ವಾಗ್ದಾಳಿ ಮಾಡಿದ್ದಾರೆ.
ಜನಪರ ದಾಯಿತ್ವವನ್ನು ಸಂಪೂರ್ಣ ಮರೆತು, ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಈ ಬೇಜವಾಬ್ದಾರಿ ರಾಜ್ಯ ಸರ್ಕಾರ, ನಮ್ಮ ಯುವಕ-ಯುವತಿಯರ ಭವಿಷ್ಯವನ್ನು ಹಗುರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮೊದಲು ಬಂಧಿತರಾಗಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳನ್ನು ಬಿಡುಗಡೆ ಮಾಡಿ, ಈ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ! ಇನ್ನು ವಿಳಂಬ ಮಾಡದೆ ರಾಜ್ಯ ಸರ್ಕಾರ, ಪರೀಕ್ಷಾರ್ಥಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ನೀಡಬೇಕು ಎಂದು ವಿಜಯೇಂದ್ರ ಆಗ್ರಹ ಮಾಡಿದರು.

