ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಾದ್ಯಂತ 1,400ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಮತ್ತು ವಿಲ್ಲಾ ನಿವಾಸಿ ಕಲ್ಯಾಣ ಸಂಘಗಳನ್ನು ಪ್ರತಿನಿಧಿಸುವ ಬೆಂಗಳೂರು ಅಪಾರ್ಟ್ಮೆಂಟ್ ಫೆಡೆರೇಷನ್, ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಿದ್ದಪಡಿಸಲಾಗಿರುವಂತಹ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಕಾನೂನನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
3.50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮತ್ತು ಒಂದೂವರೆ ದಶಲಕ್ಷ (15 ಲಕ್ಷ) ನಾಗರಿಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಬಿಎಎಫ್, ದೀರ್ಘಕಾಲದಿಂದ ಬಾಕಿ ಇರುವ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ 1972 ಅನ್ನು ನವೀಕರಿಸಿ, ಸಮಗ್ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಅನ್ನು ಜಾರಿಗೆ ತರಲು ಒತ್ತಾಯಿಸಿದೆ.
ವಿಳಂಬದಿಂದ ತೊಂದರೆ-
ಬಿಎಎಫ್ ಅಧ್ಯಕ್ಷ ಸತೀಶ್ ಮಲ್ಯ ಮಾತನಾಡಿ, ಅಪಾರ್ಟ್‌ಮೆಂಟ್ ಮಾಲೀಕರಿಗೆ ಸಮಗ್ರ ಕಾನೂನು ಚೌಕಟ್ಟನ್ನು ಜಾರಿಗೊಳಿಸುವುದು ಬಿಎಎಫ್ ನ ಹಲವು ವರ್ಷಗಳ ಮುಖ್ಯ ಬೇಡಿಕೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಮುಖ ಬದ್ಧತೆಯಾಗಿ ಸೇರಿಸಿದ್ದವು.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ಈ ವರ್ಷ ಮುಖ್ಯಮಂತ್ರಿಗಳು ತಮ್ಮ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಹಂತದಲ್ಲಿ ಇದು ಕೇವಲ ವಿನಂತಿಯಾಗಿ ಉಳಿದಿಲ್ಲ, ಇದು ಈಗ ನಮ್ಮ ಬೇಡಿಕೆಯಾಗಿದೆ. ಈ ವಿಳಂಬ, ಕಾನೂನಿನ ಸ್ಪಷ್ಟತೆಯ ಕೊರತೆ ಮತ್ತು ವ್ಯಾಜ್ಯಗಳಿಂದಾಗಿ ಲಕ್ಷಾಂತರ ಮನೆ ಮಾಲೀಕರು ಈಗಾಗಲೇ ತೊಂದರೆಗೀಡಾಗಿದ್ದಾರೆ ಎಂದರು.
ಹೊಸ ಕಾಯ್ದೆಯಲ್ಲಿ ಸೇರಿಸಬೇಕಾದ ಪ್ರಮುಖ ಅಂಶಗಳು:
ಈಗಾಗಲೇ ಬಿಎಎಫ್ ಸರ್ಕಾರಕ್ಕೆ ಸಲ್ಲಿಸಿರುವ ವಿವರವಾದ ಪ್ರಸ್ತಾವನೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಸ ಕಾನೂನಿನಲ್ಲಿ ಅಳವಡಿಸಲು ಸಲಹೆ ನೀಡಿದೆ:
ಆಸ್ತಿ ಹಕ್ಕುಗಳ ವರ್ಗಾವಣೆ ಮತ್ತು ಮಾಲೀಕತ್ವ: ಬಿಲ್ಡರ್/ಪ್ರವರ್ತಕರಿಂದ ಅಪಾರ್ಟ್‌ಮೆಂಟ್‌ಮಾಲೀಕರಿಗೆ ಆಸ್ತಿ ಹಕ್ಕುಗಳ ವರ್ಗಾವಣೆ, ಅವಿಭಜಿತ ಪಾಲು ಮತ್ತು ಆಸ್ತಿಯ ಉತ್ತರಾಧಿಕಾರ ಕುರಿತು ಸ್ಪಷ್ಟತೆ.
ಮಾಲೀಕರ ಸಂಘಗಳ ನಿರ್ವಹಣೆ: ಅಪಾರ್ಟ್‌ಮೆಂಟ್‌ಮಾಲೀಕರ ಸಂಘದ ರಚನೆ, ನೋಂದಣಿ, ಉಪ-ಕಾನೂನುಗಳ ಜಾರಿಗೊಳಿಸುವ ಸಾಮರ್ಥ್ಯ, ಸಾಮಾನ್ಯ ಪ್ರದೇಶಗಳ ನಿರ್ವಹಣೆ ಮತ್ತು ನಿಧಿಗಳ ಬಳಕೆ.
ವಿವಾದ ಇತ್ಯರ್ಥ ಮತ್ತು ಸಮರ್ಥ ಪ್ರಾಧಿಕಾರ: ವಿವಾದ ಇತ್ಯರ್ಥಕ್ಕೆ ಸ್ಪಷ್ಟ ಯಾಂತ್ರಿಕ ವ್ಯವಸ್ಥೆ ಮತ್ತು ಸೂಕ್ತ ಪ್ರಾಧಿಕಾರದ ವ್ಯಾಖ್ಯಾನ.
ಪುನರಾಭಿವೃದ್ಧಿ: ಹಳೆಯ ಕಟ್ಟಡಗಳ ಪುನರಾಭಿವೃದ್ಧಿ ಮತ್ತು ವಿಲೀನದಂತಹ ಆಧುನಿಕ ವಸತಿ ಅಗತ್ಯಗಳಿಗೆ ಅವಕಾಶ.
ಏಕೀಕೃತ ಆಡಳಿತ: ಬಹು ಕಾಯ್ದೆಗಳ ಬದಲಾಗಿ, ಏಕೈಕ, ಸಮಗ್ರ ಕಾಯ್ದೆಯ ಮೂಲಕ ಆಡಳಿತದ ಮಾನದಂಡಗಳನ್ನು ಬಲಪಡಿಸುವುದು.
ಬಿಎಎಫ್ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಮಾತನಾಡಿ, ಹೊಸ ಕಾನೂನು ರಚಿಸಲಾಗುತ್ತಿದ್ದು, ಸದ್ಯದಲ್ಲೇ ಅದನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕಮಾರ್‌ಅವರು ಸದನದಲ್ಲಿ ಉತ್ತರಿಸಿ ಸುಮಾರು ಎರಡು ವರ್ಷ ಕಳೆದಿದೆ. ಆಧುನಿಕ ಅಪಾರ್ಟ್‌ಮೆಂಟ್‌ಗಳ ಅಗತ್ಯಗಳನ್ನು ಪರಿಹರಿಸುವ ಈ ಹೊಸ ಕಾನೂನನ್ನು ಕೂಡಲೇ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಆಗ್ರಹಿಸಿದರು.
ಬಿಎಎಫ್ ಖಜಾಂಚಿ ಕಿರಣ್ ಹೆಬ್ಬಾರ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಮ್ಮ ಬೇಡಿಕೆ ಬೆಂಬಲಿಸಿದ ಮತ್ತು ಸದನದಲ್ಲಿ ಈ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದ ಎಲ್ಲಾ ಶಾಸಕರು ಮತ್ತು ಸಚಿವರಿಗೆ ನಾವು ಧನ್ಯವಾದ ಹೇಳುತ್ತೇವೆ. ಕರ್ನಾಟಕ ರಾಜ್ಯದ ಲಕ್ಷಾಂತರ ಮನೆ ಮಾಲೀಕರಿಗೆ ಸಹಾಯ ಮಾಡುವ ಹೊಸ ಕಾಯ್ದೆಯನ್ನ ಶೀಘ್ರದಲ್ಲಿ ಜಾರಿಗೊಳಿಸುವ ಮೂಲಕ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಮಲ್ಯ, ಅಧ್ಯಕ್ಷರು ಬಿಎಎಫ್, +91 97400 43366, ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ BAF, +91 95383 99222, ಕಿರಣ್ ಹೆಬ್ಬಾರ್, ಖಜಾಂಚಿ BAF, +91 98454 33600, ವಿಶ್ವ ವೆಂಕಟ್ ರೆಡ್ಡಿ, ಆಡಳಿತ ಮಂಡಳಿ ಸದಸ್ಯ ಬಿಎಎಫ್, +91 98861 19755

