ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿರುವುದು ಕಂಡುಬಂದಿದ್ದು ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಕಾಡಲಿದೆ. ಹೆಣ್ಣು ಮಕ್ಕಳು ಮುಂದಿನ ದಿನಗಳಲ್ಲಿ ಗಹಿಣಿಯಾಗಿ, ತಾಯಿಯಾಗಿ ಕುಟುಂಬದ ಹೊಣೆ ಹೊರಬೇಕಾದ ತಾರುಣ್ಯ ವ್ಯವಸ್ಥೆ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಹೆಚ್ಚಿನ ಅರಿವು ಹೊಂದಬೇಕು ಎಂದು ಸಂಜೀವಿನಿ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ಲತಾ ರಾಮಚಂದ್ರಪ್ಪ ಎಚ್ಚರಿಸಿದರು.
ನಗರದ ಮೋಕ್ಷಗುಂಡ ವಿಶ್ವೇಶ್ವರ ವಿದ್ಯಾ ಮಂದಿರದ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಹಾಗೂ ಮುಂದಿನ ಪೀಳಿಗೆಯನ್ನು ಪೋಷಿಸುವ ಹೆಣ್ಣುಮಕ್ಕಳ ಆರೋಗ್ಯ ಉತ್ತಮವಾಗಿರಬೇಕು. ಹೆಣ್ಣು ಮಕ್ಕಳು ಓದು ಸೇರಿದಂತೆ ನಾನಾ ಅಭಿವದ್ಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಅದೇ ವೇಳೆ ಅವರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸಿರುವುದು ಆತಂಕ ಮೂಡಿಸಿದೆ ಎಂದು ಡಾ.ಲತಾ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣುಮಕ್ಕಳ ಆರೋಗ್ಯಕ್ಕಾಗಿ ಸಾಕಷ್ಟು ಅನುದಾನ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ಆರೋಗ್ಯ ಮಾಹಿತಿಯ ಅರಿವು ಮೂಡಿಸುವ ಗುರುತರ ಜವಾಬ್ದಾರಿ ಹೆಣ್ಣುಮಕ್ಕಳ ಮೇಲಿದೆ ಎಂದರು.
ಹೆಣ್ಣು ಮಕ್ಕಳು ಸೇರಿದಂತೆ ಮಕ್ಕಳು ತರಕಾರಿ ಹಣ್ಣುಗಳು ಮೊಟ್ಟೆ ಮೊಳಕೆ ಕಾಳುಗಳ ಸೇವನೆ ಅಗತ್ಯ. ಮಕ್ಕಳು ಹೊರಗಿನ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದಿರಬೇಕು ಅನಿಮಿಯ ಹಿಮೋಗ್ಲೋಬಿನ್ ಗರ್ಭಕೋಶದ ಕ್ಯಾನ್ಸರ್, ಹೆಚ್ಐವಿ ಮತ್ತಿತರರ ಮರಣಾಂತಿಕ ರೋಗಗಳ ಬಗ್ಗೆ ಎಚ್ಚರವಹಿಸಬೇಕು.
ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ಬಳಸುವ ಸಾಧನಗಳ ಬಗ್ಗೆ ತಿಳುವಳಿಕೆ ನೀಡಿದರು. 6ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಲತಾ ರಾಮಚಂದ್ರಪ್ಪ ರವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಎಂ ಬಸವರಾಜಪ್ಪ, ಉಪಾಧ್ಯಕ್ಷ ಕೆ ಆರ್ ವೀರಭದ್ರಯ್ಯ, ಕಾರ್ಯದರ್ಶಿ ಹೆಚ್ ಎಂ ಬಸವರಾಜ್, ಖಜಾಂಚಿ ಸಣ್ಣ ಭೀಮಣ್ಣ, ನಿರ್ದೇಶಕರಾದ ದೇವರಾಜ್, ರವಿಪ್ರಸಾದ್, ಸೂರ್ಯಪ್ರಕಾಶ್, ಹರ್ಷ ಧರೇದಾರ್, ಮುಖ್ಯ ಶಿಕ್ಷಕ ಜಿ. ತಿಪ್ಪೇಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಹಾಜರಿದ್ದರು.

