ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಪೇಸ್ ಗ್ರೂಪ್‌ನ ಸಂಸ್ಥಾಪಕ ಡಾ.ಪಿ.ಎ.ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿದ್ದು, ಸುಮಾರು 36,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಫೇಸ್ ಮತ್ತು ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ, ಫೇಸ್ ಟ್ರೈಡ್ ಪಾರ್ಕ್ ಮತ್ತು ಫೇಸ್ ಸ್ಪೋರ್ಟ್ಸ್ ಅರೇನಾದ ಶಿಲಾನ್ಯಾಸ ಹಾಗೂ ಪೇಸ್ ಕೇರ್ಸ್ ಸಮುದಾಯ ಸೇವೆ ಯೋಜನೆಗಳ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪೇಸ್ ಸಂಸ್ಥೆ, ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ. ಉತ್ತಮ ಕಲಿಕಾ ವಾತಾವರಣವನ್ನು ನೀಡುವ ಶಿಕ್ಷಣ ಸಂಸ್ಥೆಯಾಗಿರುವುದು ಶ್ಲಾಘನೀಯ ಎಂದರು.
ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನೂ ವಿದ್ಯಾರ್ಥಿಗಳು ಹೊಂದಿರಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಲೀ, ಅಂಧಶ್ರದ್ಧೆಯ ಪಾಲನೆಯಾಗಲಿ ಮಾಡಬಾರದು ಎಂದು ಸಿಎಂ ಎಚ್ಚರಿಸಿದರು.
ಕೃತಕ ಬುದ್ಧಿಮತ್ತೆ ಕಲಿತು ಹಣೆಬರಹ ಅಂದರೆ ಅದು ವಿದ್ಯೆಯೇ ಅಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತ ವಿದ್ಯೆ ಅಗತ್ಯವಿದೆ. ವೈಚಾರಿಕತೆ, ವೈಜ್ಞಾನಿಕತೆ ಇರುವ ಹಾಗೂ ಜಾತಿ ವ್ಯವಸ್ಥೆಗೆ ಪರಿಹಾರ ರೂಪದಲ್ಲಿರುವ ವಿದ್ಯೆ ಬೇಕಿದೆ. ಸ್ವಾತಂತ್ರ್ಯಬಂದು 79 ವರ್ಷ ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬರದೇ ಹೋದರೆ ಪ್ರಯೋಜನ ಏನು? ಎಂದು ಸಿಎಂ ತೀಕ್ಷ್ಣವಾಗಿ ಪ್ರಶ್ನಿಸಿದರು.
ಪೇಸ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಇಬ್ರಾಹಿಂ ಅವರ ಕನಸನ್ನು ನನಸು ಮಾಡುವ ಕೆಲಸ ಸಂಸ್ಥೆಯಿಂದ ಆಗಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.

