ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಪಕ್ಷಗಳಲ್ಲಿ ಬಣ ರಾಜಕೀಯ ಎಗ್ಗಿಲ್ಲದೆ ಸಾಗಿದೆ. ಕಾಂಗ್ರೆಸ್ಸಿನಲ್ಲಿ ಮಾತ್ರ ಬಣ ಇದೆ ಎಂದರೆ ತಪ್ಪು, ಬಿಜೆಪಿಯಲ್ಲೂ ಬಣ ರಾಜಕೀಯ ತಲೆ ಎತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಹುದ್ದೆಗಾಗಿ ಬಣಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದು ಬಿಜೆಪಿ ಪಕ್ಷದ ಒಂದು ಬಣ ದೆಹಲಿಯಲ್ಲಿ ಮೊಕ್ಕಾಂ ಹೂಡಿ ತಂತ್ರ ರೂಪಿಸುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸೆಟೆದಿರುವ ಬಣ ದೆಹಲಿಯಲ್ಲಿರುವುದು ಗಮನಕ್ಕೆ ಬರುತ್ತಿದ್ದಂತೆ ಪುತ್ರ ಪ್ರೇಮಿ ಬಿ.ಎಸ್. ಯಡಿಯೂರಪ್ಪ ಕೂಡ ದೆಹಲಿಯತ್ತ ಮುಖ ಮಾಡಿರುವು ಕುತೂಹಲ ಮೂಡಿಸಿದೆ.
ಬಿಜೆಪಿ ಮನೆಯಲ್ಲಿ ಭಿನ್ನಮತದ ಬೇಗುದಿ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಯಡಿಯೂರಪ್ಪ ವಿರೋಧಿ ಬಣ ಬಿಜೆಪಿ ವರಿಷ್ಠರ ಅಂಗಳಕ್ಕೆ ತೆರಳಿದೆ. ದೆಹಲಿಗೆ ತೆರಳಿದ್ದ ಭಿನ್ನಮತಿಯರು ವರಿಷ್ಠರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ರಾಜ್ಯಾಧ್ಯಕ್ಷರಾಗಿ ತಮ್ಮ ಪುತ್ರರನ್ನೇ ಮುಂದುವರೆಸಬೇಕೆಂದು ವರಿಷ್ಠರಿಗೆ ಒತ್ತಡ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

