ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.೯ ರಂದು ಬೆಳಗಾವಿ ಸುವರ್ಣಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ ಲಿಂಗಾವರಹಟ್ಟಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ರೀತಿಯ ಬೆಳೆಗಳಿಗೆ ಎಕರೆಗೆ ನಲವತ್ತು ಸಾವಿರ ರೂ. ಕೊಡಬೇಕು. ಬೆಳೆ ವಿಮೆ ಪಾವತಿಸಿರುವ ರೈತರಿಗೆ ವಿಮೆ ಹಣವನ್ನು ಶೀಘ್ರವೇ ನೀಡಬೇಕು. ಜಿಲ್ಲಾ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀಧಿ ಕೇಂದ್ರ ತೆರೆದು ಒಬ್ಬ ರೈತನಿಂದ ಐವತ್ತು ಕ್ವಿಂಟಾಲ್ ಮೆಕ್ಕೆಜೋಳ ಖರೀಧಿಸಬೇಕು.
ಗೋಮಾಳ ಅರಣ್ಯ ಭೂಮಿ, ಬಗರ್‌ಹುಕುಂ, ಸೇಂದಿವನ, ಹುಲ್ಲುಬನ್ನಿ, ಖರಾಬು, ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು. ರೈತರ ಸಂಪೂರ್ಣ ಬೆಳೆ ಸಾಲ ಮನ್ನ ಆಗಬೇಕು. ಭದ್ರಾಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಕೆರೆಗಳಿಗೆ ನೀರು ಹರಿಸಬೇಕು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸಿ ಮೂರು ಕೃಷಿ ಕಾಯಿದೆಗಳನ್ನು ಸರ್ಕಾರ ಹಿಂದಕ್ಕೆ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಸಿ.ಡಿ.ನಿಜಲಿಂಗಪ್ಪ, ಕಾರ್ಯದರ್ಶಿ ನವೀನ ಆರ್.ಮದಕರಿ, ಬಿ.ವೆಂಕಟೇಶ, ಲೋಕಾಕ್ಷಮ್ಮ, ಶಿವಮೂರ್ತಿ, ನಾಗರಾಜ್, ಹೆಚ್.ಎನ್.ಅಂಜು,. ಅರುಣ್ ಕುಮಾರ್, ವೆಂಕಟೇಶ್, ರಂಗಸ್ವಾಮಿ, ಮಲ್ಲಿಕಾರ್ಜುನ್, ಜಯಲಕ್ಷ್ಮಿ, ಶಕುಂತಲ, ಮಂಜುಳ ಕೊಳಹಾಳ್, ಕಾಂತರಾಜ್ ಮಾಳಪ್ಪನಹಟ್ಟಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

