ಅಂಬೇಡ್ಕರ್‌ ಆಶಯದಂತೆ ಪ್ರತಿಯೊಬ್ಬರು ನಡೆಯಬೇಕು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುನ್ಸಿಪಲ್ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಪೌರ ಕಾರ್ಮಿಕರ ಸೇವಾ ಸಂಘದಲ್ಲಿ ಶನಿವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿನಿರ್ವಾಣ ದಿನವನ್ನು ಆಚರಿಸಿ ನಂತರ ನಗರಸಭೆ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ದಲಿತರು, ಶೋಷಿತರು, ತುಳಿತಕ್ಕೊಳಗಾದವರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜಾತಿ ಧರ್ಮದವರಿಗೆ ಸಂವಿಧಾನದಲ್ಲಿ ಸಮಾನತೆಯನ್ನು ಕಲ್ಪಿಸಿರುವ ಅಂಬೇಡ್ಕರ್‌ರವರ ಆಶಯದಂತೆ ಪ್ರತಿಯೊಬ್ಬರು ನಡೆದುಕೊಂಡಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಅರ್ಥ ಸಿಗುತ್ತದೆ. ಪೌರ ಕಾರ್ಮಿಕರು ಮಕ್ಕಳನ್ನು 

- Advertisement - 

ತಮ್ಮಂತೆಯೆ ಪೌರ ಕಾರ್ಮಿಕರನ್ನಾಗಿ ಮಾಡಬೇಡಿ. ಸಂವಿಧಾನದಡಿಯಲ್ಲಿ ಸಿಗುವ ಸೌಲತ್ತುಗಳನ್ನು ಬಳಸಿಕೊಂಡು ಶಿಕ್ಷಣವಂತರನ್ನಾಗಿಸಿ ದೊಡ್ಡ ಹುದ್ದೆಗಳಿಗೆ ಕಳಿಸಿ ಎಂದು ಮನವಿ ಮಾಡಿದರು.

ಚಿಕ್ಕಂದಿನಲ್ಲಿಯೇ ಸಾಕಷ್ಟು ಅವಮಾನ, ನೋವು, ಹಿಂಸೆಗಳನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ಜನಕ್ಕೆ ಇಂತಹ ಸಂಕಷ್ಟ ಎದುರಾಗಬಾರದೆಂದು ಬಲಿಷ್ಟವಾದ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಆಶಯಗಳಿಗೆ ಎಲ್ಲಿಯೂ ಧಕ್ಕೆಯಾಗಲು ಬಿಡಬಾರದೆಂದು ಹೇಳಿದರು.

- Advertisement - 

ಪೌರ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ, ಸಹ ಕಾರ್ಯದರ್ಶಿ ನಿಜಲಿಂಗಪ್ಪ, ಉಪಾಧ್ಯಕ್ಷರುಗಳಾದ ಕುಂಚಿಗನಹಾಳ್ ಮಹಾಲಿಂಗಪ್ಪ, ನಿಜಲಿಂಗಪ್ಪ, ಖಜಾಂಚಿ ಗೋವಿಂದಪ್ಪ ಸೇರಿದಂತೆ ಪದಾಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನದಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";