ಬಿಜೆಪಿಯ ಭ್ರಷ್ಟಾಚಾರ, ಹಗರಣಗಳಿಂದ ಕನ್ನಡಿಗರು ತಲೆತಗ್ಗಿಸಿತ್ತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಲೋಕಾಯುಕ್ತ ಬಿ.ವೀರಪ್ಪ ಅವರು ಭ್ರಷ್ಟಾಚಾರದ ಬಗ್ಗೆ ಆಡಿರುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದ ಬಿಜೆಪಿ ನಾಯಕರು ಒಬ್ಬರ ಮೇಲೆ ಒಬ್ಬರಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವುದು ಆಕಾಶದ ಕಡೆ ನೋಡಿ ಉಗುಳಿದಂತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 ಬಿ.ವೀರಪ್ಪನವರು ಆಡಿರುವ ಮಾತುಗಳು 2019ರ ಅವಧಿಯಲ್ಲಿ ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು ನೀಡಿದ ವರದಿಗೆ ಸಂಬಂಧಿಸಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಇತ್ತು ಎನ್ನುವುದನ್ನು ನಾವೇ ನೆನಪಿಸಬೇಕೇ?

- Advertisement - 

ಸಾವಿರಾರು ಕೋಟಿ ಖರ್ಚು ಮಾಡಿ ಆಪರೇಷನ್ ಕಮಲದ ಮೂಲಕ‌ ಅಧಿಕಾರಕ್ಕೆ ಏರಿದ್ದ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದನ್ನು ಇಡೀ ರಾಜ್ಯದ ಜನ ನೋಡಿದ್ದಾರೆ ಎಂದು ಅವರು ಆರೋಪಿಸಿದರು.
ಕೊರೊನಾ ಸಂದರ್ಭದಲ್ಲಿ ಜನರ ಶವಗಳ ಮೇಲೆ ಕೂಡ ಲೂಟಿ ಮಾಡಿದ್ದರು. ಅಕ್ರಮವಿಲ್ಲದೆ ನೇಮಕಾತಿ ಪ್ರಕ್ರಿಯೆಗಳೇ ನಡೆಯುತ್ತಿರಲಿಲ್ಲ
, ವರ್ಗಾವಣೆ ದಂಧೆಯೇ ಸರ್ಕಾರದ ನಿತ್ಯ ಕಾಯಕವಾಗಿತ್ತು.

ಟೆಂಡರ್ ಕಾಮಗಾರಿಗಳಲ್ಲಿ 40% ಕಮಿಷನ್ ರಾರಾಜಿಸುತ್ತಿತ್ತು. ಬಿಜೆಪಿ ನಾಯಕರ ಭ್ರಷ್ಟಾಚಾರದ ಹಗರಣಗಳಿಂದ ದೇಶದೆದುರು ಕನ್ನಡಿಗರು ತಲೆತಗ್ಗಿಸಬೇಕಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ದೂರಿದರು.

- Advertisement - 

ಇದರ ಮೇಲೆಯೇ ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು ವರದಿ ನೀಡಿದ್ದು. ನಿನ್ನೆ ಸಮಾರಂಭದಲ್ಲಿ ಮಾತನಾಡುವಾಗ ಬಿ.ವೀರಪ್ಪನವರು ನಮ್ಮದೇ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ್ದು ಎಂಬ ಸತ್ಯ ಬಿಜೆಪಿಯವರಿಗೆ ಅರ್ಥವಾಗದೆ ಇದ್ದುದ್ದು ವಿಪರ್ಯಾಸ.

ಉಪಲೋಕಾಯುಕ್ತರು ತಮ್ಮ ಮಾತುಗಳು 2019 ಅವಧಿಯ ಭ್ರಷ್ಟಾಚಾರ ವರದಿಗೆ ಸಂಬಂಧಿಸಿದ್ದು, ಈಗಿನ ಕಾಲಕ್ಕೆ ಸಂಬಂಧಪಟ್ಟದ್ದಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.

ನಮ್ಮ ಸರ್ಕಾರ ಬಿಜೆಪಿ ಸರ್ಕಾರ ಮಾಡಿರುವ ಪಾಪದ ಕೊಳೆಯನ್ನು ತೊಳೆಯುವ ಕೆಲಸದಲ್ಲಿ ನಿರತವಾಗಿದೆ. ಈ ಎರಡೂವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ಸ್ವಚ್ಚ ಮಾಡುವ ಕೆಲಸ ಮಾಡಿದ್ದೇವೆ, ಮಾಡಬೇಕಾದದ್ದು ಇನ್ನಷ್ಟಿದೆ ಎಂಬುದು ಗೊತ್ತಿದೆ. ಅದನ್ನೂ ಮಾಡುತ್ತೇವೆ.

ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ 1 ಲಕ್ಷದ 9 ಸಾವಿರ ಕೋಟಿ ಹಣವನ್ನು ನೇರವಾಗಿ ನಾಡಿನ ಜನರ ಮನೆ ಬಾಗಿಲಿಗೆ ತಲುಪಿಸಿ ನುಡಿದಂತೆ ನಡೆದಿದ್ದೇವೆ. ಇದು ನಮ್ಮ ಬದ್ಧತೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Share This Article
error: Content is protected !!
";