ಸ್ವಚ್ಛತೆ, ಬೀದಿ ದೀಪ, ಕುಡಿವ ನೀರಿನ ಸಮಸ್ಯೆ ಬರದಂತೆ ನೋಡಿಕೊಂಡರೆ ಪಿಡಿಒಗಳಿಗೆ ತಲಾ 5 ಲಕ್ಷ ಬಹುಮಾನ ನೀಡುವೆ
ಸ್ವಚ್ಛತೆ, ಬೀದಿ ದೀಪ, ಕುಡಿವ ನೀರಿನ ದೂರು ಬಂದರೆ ತೇರಮಲ್ಲೇಶ್ವರ ಆಣೆ ಅಮಾನತು ಮಾಡುವೆ-ಸಚಿವ ಸುಧಾಕರ್
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಬರದಂತೆ ಪ್ರತಿಯೊಬ್ಬ ಪಿಡಿಒಗಳು ಕರ್ತವ್ಯ ನಿರ್ವಹಿಸಿದರೆ ತಲಾ 5 ಲಕ್ಷ ಬಹುಮಾನ ನೀಡುವೆ. ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರಿನ ದೂರು ಬಂದರೆ ತೇರಮಲ್ಲೇಶ್ವರ ಆಣೆ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ಎಚ್ಚರಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪದ ಸದಸ್ಯ ಕೇಳಿ ಬಂದರೆ ಅಂಥಹ ಪಿಡಿಒಗಳ ಗ್ರಾಮ ಪಂಚಾಯಿತಿಗಳನ್ನು ವಿಶೇಷ ಆಡಿಟ್ ವರದಿಗೆ ಒಳಪಡಿಸಿ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ದಯವಿಟ್ಟು, ದಯವಿಟ್ಟು, ದಯವಿಟ್ಟು ಇದಕ್ಕೆ ಅವಕಾಶ ನೀಡಬೇಡಿ ಎಂದು ಸಚಿವ ಪಿಡಿಒಗಳ ಮುಂದೆ ಗೋಗರೆದ ಪ್ರಸಂಗ ಕೂಡ ಜರುಗಿದ್ದು ವಿಪರ್ಯಾಸ. ಅಂದರೆ ಯಾವೊಬ್ಬ ಪಿಡಿಒಗಳು ಗ್ರಾಮಗಳ ಸಮಸ್ಯೆಗಳತ್ತ ಗಮನ ನೀಡದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು. ಪಿಡಿಒಗಳಿಗೆ ಸಚಿವರು ದಯವಿಟ್ಟು ಎಂದು ಬೇಡಿಕೊಳ್ಳುವಂತ ಪ್ರಸಂಗ ಎದುರಾಗಿರುವುದು ಪಿಡಿಒಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ.
ಇದಕ್ಕೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು, ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ, ಬೀದಿ ದೀಪ ಅಳವಡಿಕೆಗೆ ಆದ್ಯತೆ ನೀಡಬೇಕು. ಸ್ವಚ್ಛತೆ ಮಾಡುತ್ತಿರುವ ಪ್ರದೇಶದ ಜಿಪಿಎಸ್ ಪೋಟೋಗಳನ್ನು ಅಪ್ಲೋಡ್ ಮಾಡಲು ಪಿಡಿಒಗಳಿಗೆ ಸೂಚನೆ ನೀಡಿದರು.
ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ ಉದಾಸೀನ ಮಾಡುವಂತ ಪಿಡಿಒಗಳು, ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಚ್ಚರಿಸಿದರು.
ಸಚಿವ ಸುಧಾಕರ್ ಮಾತು ಮುಂದುವರೆಸಿ, ಸ್ಲಂ ಏರಿಯಾ, ಎಸ್ಸಿ ಕಾಲೋನಿಗಳಿಗೆ ಪಿಡಿಒಗಳು ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಬಗ್ಗೆ ನೋಡಿ, ನೀವು ಕೊಳಚೆಯಲ್ಲಿ ವಾಸ ಮಾಡಿದರೆ ಅವರ ಸಮಸ್ಯೆ ಅರ್ಥವಾಗುತ್ತದೆ. ಸರ್ಕಾರಿ ಕೆಲಸ, ಜನಪ್ರತಿನಿಧಿಗಳಾಗುವುದು ಅತ್ಯಂತ ಪವಿತ್ರ. ಎಲ್ಲರಿಗೂ ಈ ಅವಕಾಶ ದೊರೆಯವುದಿಲ್ಲ. ಅವಕಾಶ ಸಿಕ್ಕಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡದಿದ್ದರೆ ಜೀವನದಲ್ಲಿ ದೇವರೇ ಶಿಕ್ಷೆಗೆ ಗುರಿ ಮಾಡುತ್ತಾನೆ ಎಂದು ಸಚಿವ ಸುಧಾಕರ್ ಎಚ್ಚರಿಸಿದರು.
ಆಯಾಯ ಗ್ರಾಮ ಪಂಚಾಯಿತಿಗಳಲ್ಲಿನ ಕಾರ್ಖಾನೆಗಳು, ಗಾರ್ಮೆಂಟ್ಸ್ ಫ್ಯಾಕ್ಟರಿ, ಕೈಗಾರಿಗಳಿಂದ ಸಿಎಸ್ ಆರ್ ಅನುದಾನ ಸಂಗ್ರಹ ಮಾಡಿಕೊಂಡು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡುವ ಅವಕಾಶ ಇದೆ. ಆದರೆ ಇದಕ್ಕೆ ಒಬ್ಬ ಪಿಡಿಒ ಚಿಂತನೆ ಮಾಡದಿರುವುದು ವಿಪರ್ಯಾಸ ಎಂದು ಸಚಿವರು ಗುಡುಗಿದರು.
ಸಿಎಸ್ ಆರ್ ಅನುದಾನ ನೀಡುವಂತ ಕೈಗಾರಿಕೆ, ಕಂಪನಿ, ಫ್ಯಾಕ್ಟರಿಗಳ ಮುಖ್ಯಸ್ಥರನ್ನು ತಹಶೀಲ್ದಾರ್ ಕರೆಸಿ ಸಿಎಸ್ ಆರ್ ನಿಧಿ ನೀಡುವಂತೆ ತಾಕೀತು ಮಾಡಬೇಕು. ಈ ಕೆಲಸವನ್ನು ತಹಶೀಲ್ದಾರ್, ಇಒ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಹಯೋಗದಲ್ಲಿ ಮಾಡಲು ಸಚಿವರು ಸೂಚನೆ ನೀಡಿದರು.
ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಬೇಕು, ಭೂ ರಹಿತರಿಗೆ ಹಕ್ಕು ಪತ್ರಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು, ಸರ್ಕಾರಿ ಶಾಲೆ, ಕಾಲೇಜ್ ಗಳ ಹೆಸರುಗಳಿರುವಂತೆ ಪಹಣಿ ಹೊರಡಿಸಬೇಕು, ಶುದ್ಧ ಕುಡಿಯುವ ನೀರಿನ ದುರಸ್ತಿ ಕಾರ್ಯವನ್ನು ಮಾಡಿಸಬೇಕು. ಸಿಎ ಸೈಟ್ ಸೇರಿದಂತೆ ಇತರೆ ಸರ್ಕಾರಿ ಜಾಗಗಳನ್ನು ಗುರುತಿಸಿ ಹದ್ದುಬಸ್ತ್ ಮಾಡಿಕೊಳ್ಳಬೇಕು ಎಂದು ಸಚಿವ ಸುಧಾಕರ್ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಸೂಚನೆ ನೀಡಿದರು.
ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗಾಗಿ ವಿಶೇಷ ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಲೋಪ ಆಗಬಾರದು ಎಂದು ಸಚಿವರು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂಡಾರು ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲೂ ಪ್ರವೇಶ ದ್ವಾರ ಮತ್ತು ಹೊರ ಹೋಗುವ ಮಾರ್ಗಗಳು, ದೇವಸ್ಥಾನ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಪಿಡಿಒಗಳು ಅಗತ್ಯ ಕ್ರಮಕೈಗೊಳ್ಳಬೇಕು. ಇದರಿಂದ ಅಪರಾಧ ಕೃತ್ಯ ತಡೆಯಲು ಸಾಧ್ಯವಾಗಲಿದೆ ಎಂದು ಅವರು ಕೋರಿದರು.
ಜಿಪಂ ಸಿಇಒ ಡಾ.ಆಕಾಶ್, ನಗರಸಭೆ ಪೌರಾಯುಕ್ತ ಎ.ವಾಸೀಂ, ವ್ಯವಸ್ಥಾಪಕಿ ಬಿ.ಆರ್ ಮಂಜುಳ, ಇಒ, ವಿವಿಧ ಇಲಾಖೆಗಳ ಇಂಜಿನಿಯರ್ ಗಳು, ಶಿಕ್ಷಣ ಇಲಾಖೆಯ ಡಿಡಿಪಿಐ ಮಂಜುನಾಥ್, ಬಿಇಒ ತಿಪ್ಪೇಸ್ವಾಮಿ, ಪಿಡಿಒಗಳು ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

