ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ತೂಬಗೆರೆ ಹೋಬಳಿ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ.ಡಿ.10 ರಿಂದ 18 ವರೆವಿಗೂ ಬಾರಿ ದನಗಳ ಜಾತ್ರೆ ಹಾಗು ಡಿಸೆಂಬರ್ 25ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಗೆ ಬೇಕಾಗಿರುವ ಎಲ್ಲಾ ಸಿದ್ಧತಾ ಕಾರ್ಯಗಳು ಪ್ರಾರಂಭಗೊಂಡಿವೆ.
ಸದ್ಯ ದನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮೊದಲೇ ರೈತರು, ಸುರಕ್ಷಿತ ಸ್ಥಳಗಳನ್ನು ಗುರುತಿಸಿಕೊಂಡು ಶೆಡ್‌ಹಾಕಿ ಪೆಂಡಲ್ ನಿರ್ಮಾಣ ಕೆಲಸವನ್ನ ಪ್ರಾರಂಭಿಸಿದ್ದಾರೆ.
ಮುಂಗಾರಿನ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾದ ನಂತರ ಪ್ರಥಮ ಬಾರಿಗೆ ನಡೆಯುವ ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.
ಇಲ್ಲಿಗೆ ಬರುವ ಘಾಟಿ ಸುತ್ತ ಮುತ್ತಲಿನ ಗ್ರಾಮದಿಂದ ಬರುವ ಹೋರಿಗಳಲ್ಲಿ ಹಸಿರು ಮೇವು ಮೇಯಿದು ಬಳಷ್ಠ ಗಟ್ಟಿ ಬಲಿಷ್ಠವಾಗಿರುವ

ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರುತ್ತವೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ರೈತರು ಕೃಷಿ ಕೆಲಸಗಳಿಗಾಗಿ ಹೋರಿಗಳ ಖರೀದಿಸಲು ಬರುತ್ತಾರೆ.
ಡಿಸೆಂಬರ್ 25 ಕ್ಕೆ ಬ್ರಹ್ಮರಥೋತ್ಸವ:
ಶ್ರೀ ಘಾಟಿ ಸುಬ್ರಮಣ್ಯಸ್ವಾಮಿಯ ಬ್ರಹ್ಮರಥೋತ್ಸವ ಡಿಸೆಂಬರ್ 25 ರಂದು ನಡೆಯಲಿದೆ. ಈ ಬಾರಿ ವಿಶೇಷವಾಗಿ ಪುಷ್ಪಲಂಕಾರ ದೀಪಾಲಂಕಾರಗಳಿರುತ್ತದೆ. ಭಕ್ತಾದಿಗಳ ಅನುಕೂಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ನಿರ್ದಿಷ್ಟ ಸಾಲುಗಳ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ.
ಸುಂಕ ರಹಿತ ಜಾತ್ರೆ:
ಈ ಬಾರಿಯ ಘಾಟಿ ಜಾತ್ರೆಯಲ್ಲಿ ಜಾನುವಾರುಗಳೂ ಸೇರಿದಂತೆ ಜಾತ್ರೆಗೆ ಬರುವ ಭಕ್ತರ ವಾಹನಗಳಿಗೆ ಸುಂಕ ಇರುವುದಿಲ್ಲ. ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.
ಡಿ.10 ರಿಂದ 18 ವರೆಗೆ ರಾಸುಗಳ ಜಾತ್ರೆ:
ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. ರಾಸುಗಳ ಜಾತ್ರೆ ಸಮಯದಲ್ಲಿ ವಿಶೇಷ ದೀಪಾಲಂಕಾರ, ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಾಸುಗಳಿಗೆ ರೋಗಗಳು ಹರಡದಂತೆ ಪಶು ವೈದ್ಯರ ವ್ಯವಸ್ಥೆ ಕಲ್ಪಿಸಲಾಗುವುದು.
ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗುವುದು ದೂರದ ರಾಜ್ಯದಿಂದ ವ್ಯಾಪಾರಸ್ಥರಿಗೆ ಸುರಕ್ಷ ಹಾಗು ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆ ಕ್ರಮ ವಹಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಳಿಸಿದ್ದಾರೆ.

