ವಸತಿ ನಿಲಯಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ-ಶಶಿಧರ್ ಕೊಸುಂಬೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ತಿಳಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹಾಸ್ಟೆಲ್, ಚನ್ನದೇವಿ ಅಗ್ರಹಾರ ಗ್ರಾಪಂ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ಪರಿಶೀಲಿಸಿ ಮಾತನಾಡಿದರು. ಕೊಡಿಗೇಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ಪರಿಶೀಲಿಸಲಾಯಿತು. ಈ ವೇಳೆ ವಸತಿ ನಿಲಯಗಳಲ್ಲಿ ಉತ್ತಮ ಸೌಲಭ್ಯವಿದ್ದರೂ ಕೂಡ ಮಕ್ಕಳ ರಕ್ಷಣಾ ನೀತಿ ಅನುಷ್ಟಾನವಾಗದಿರುವುದು ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡಲು ಸೂಚನೆ ನೀಡಿದರು. ಇನ್ನು  ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಲ್ ಫ್ಯಾನ್ ಅಳವಡಿಸಲು ಸೂಚನೆ ನೀಡಿದ್ದು, ಮಕ್ಕಳ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

- Advertisement - 

ಈ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಕೋಡಿಪಾಳ್ಯದಲ್ಲಿ ೫೦ ವರ್ಷಕ್ಕೂ ಹೆಚ್ಚಿನ ಸಮಯದಿಂದ ಗುಡಿಸಲಲ್ಲಿ ಮೂಲಸೌಕರ್ಯ ಇಲ್ಲದೇ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಹಾಗೂ ಮಕ್ಕಳ ಗ್ರಾಮ ಸಭೆ ಸಮಯದಲ್ಲಿ ಇಲ್ಲಿನ ಮಕ್ಕಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೆಡ್‌ಶೀಟ್ ಸೇರಿದಂತೆ ವಿವಿಧ ಸಮಸ್ಯೆಗಳು ಇರುವ ಬಗ್ಗೆ ಗ್ರಾಪಂಗೆ ಮನವಿ ಮಾಡಿರುವ ಬಗ್ಗೆ ಯುವಸಂಚಲನ ಟ್ರಸ್ಟ್ ಮಕ್ಕಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಗಮನಿಸಿದ ಆಯೋಗದ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನರ ಸಮಸ್ಯೆಗಳನ್ನು ಕೂಡ ಅಲಿಸಿದ ಅವರು ಗ್ರಾಪಂನಲ್ಲಿ ಸಭೆ ನಡೆಸಿ ಶೀಘ್ರವಾಗಿ ಗ್ರಾಮಸಭೆ ನಡೆಸಿ ಅಲ್ಲಿನ ಜನರ ಸಮಸ್ಯೆ, ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆಯನ್ನು ನೀಡಿದರು. ಅಲ್ಲಿನ ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ಇಲ್ಲದ ಮಕ್ಕಳ ಮಾಹಿತಿ ಪಡೆದು ಅವರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು  ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೊಡ್ಡಬಳ್ಳಾಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಎನ್‌ಜಿಒ ವತಿಯಿಂದ ತೆರೆಯಲಾಗಿರುವ ಅಂಗನವಾಡಿ ಕೇಂದ್ರವನ್ನು ಶೀಘ್ರವಾಗಿ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿ, ಜತೆಗೆ ಜಿಲ್ಲೆಯಲ್ಲಿನ ಅಪೌಷ್ಟಿಕ, ತೀವ್ರ ಅಪೌಷ್ಟಿಕ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು ಎಂದು ಸೂಚನೆ ನೀಡಿದರು. ಜತೆಗೆ ಮಕ್ಕಳ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಿದರು.

- Advertisement - 

ಮಕ್ಕಳೊಂದಿಗೆ ಅಧ್ಯಕ್ಷ ಮಾತುಕತೆ-
ನಂತರ  ಚನ್ನದೇವಿಅಗ್ರಹಾರ ಅಂಗನವಾಡಿ
, ಆಸ್ಪತ್ರೆ ಆವರಣದಲ್ಲಿರುವ ಅಂಗನವಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿರುವ ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ, ನೀಡಲಾಗುತ್ತಿರುವ ಊಟ, ಆರೈಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಪೋಷಕರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ, ಇಒ ಮುನಿರಾಜು, ಜಿಲ್ಲಾ ಮಕ್ಕಳ ರಕ್ಷಣಾ  ಅಧಿಕಾರಿ ಅನಿತಾಲಕ್ಷ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶಾರದಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ್, ಯುವಸಂಚಲನ ಟ್ರಸ್ಟಿನ ಅಧ್ಯಕ್ಷ ಚಿದಾನಂದ ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

 

Share This Article
error: Content is protected !!
";